ರಾಯಚೂರು: ಇಂಧನ ಇಲಾಖೆಯಿಂದ ಶೀಘ್ರವೇ 2 ಸಾವಿರ ಲೈನ್‌ಮೆನ್‌ಗಳ ನೇಮಕ ನಡೆಯಲಿದ್ದು, ಈ ಕುರಿತು15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ರಾಯಚೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಲೈನ್‌ಮೆನಗಳ ಹುದ್ದೆಗೆ ರಾಜ್ಯಾದ್ಯಂತ ಒಂದೇ ದಿನ ನೇಮಕ ನಡೆಲಿದೆ. ಪಾರದರ್ಶಕತೆಗೆ ಒತ್ತು ನೀಡಲಾಗುವುದು. ವೈಟಿಪಿಎಸ್ ಹುದ್ದೆಗಳನ್ನು ಭರ್ತಿ ಮಾಡುವಾವಾಗ ಸ್ಥಳೀಯರಿಗೆ ಆದ್ಯತೆ ನೀಡಬೇಕು ಮತ್ತು 371 ಜೆ ಅನ್ವಯ ಮೀಸಲು ನೀಡಬೇಕು. ಆದರೆ ನುರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳೀಯರ ನೇಮಕ ಆಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಆದ್ದರಿಂದ ಎಷ್ಟು ಜನ ಬೇಕು ಅಂತ ನಿರ್ಧರಿಸಿ, ಅವರಿಗೆ ಕೆಪಿಸಿಎಲ್‌ನಿಂದ ಅಗತ್ಯ ತರಬೇತಿ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ 1000 ಸಹಾಯಕ ಇಂಜಿನಿಯರ್‌ಗಳ (ಎಇ), ಕಿರಿಯ ಇಂಜಿನಿಯರ್‌ಗಳ (ಜೆಇ) ನೇಮಕ ಮಾಡಿ ಕಾರ್ಯಾದೇಶವನ್ನೂ ನೀಡಿದ್ದೇವೆ. ಇಂಧನ ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ 400 ಸಹಾಯಕ ಇಂಜಿನಿಯರ್‌ಗಳಿಗೆ ಇತ್ತೀಚೆಗೆ ಕಾರ್ಯಾನುಭವ ತರಬೇತಿ ನೀಡಲಾಗಿದೆ. ತ್ವರಿತ ನೇಮಕಾತಿಗಾಗಿ ಈ ಅಭ್ಯರ್ಥಿಗಳು ನನಗೆ ಮನವಿ ಸಲ್ಲಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಳ ನಿರಂತರ ಪ್ರಯತ್ನದಿಂದ 6 ತಿಂಗಳೊಳಗೆ ನೇಮಕ ಆದೇಶ ನೀಡಲಾಗಿದೆ ಎಂದು ಹೇಳಿದರು.
ಈ ಬಾರಿ ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ಉಷ್ಣ ಸ್ಥಾವರದಲ್ಲಿ ದಾಖಲೆ ವಿದ್ಯುತ್ ಉತ್ಪಾದನೆ ಮಾಡಿದ್ದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಅಧಿಕಾರಿಗಳ ಶ್ರಮವನ್ನು ಪ್ರಶಂಸನೀಯ. ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಪ್ರತಿನಿತ್ಯ ಸರಾಸರಿ 2000 ಮಿಲಿಯನ್ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಏಪ್ರಿಲ್ ನಲ್ಲಿ 2,400 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, ಇದು ದಾಖಲೆಯಾಗಿದೆ ಎಂದರು.
ಕಲ್ಲಿದ್ದಲು ಕೊರತೆ ಇಲ್ಲ: ನಮ್ಮ ಸರ್ಕಾರ ಬಂದ ಮೇಲೆ ಕಲ್ಲಿದ್ದಲು ಸಮಸ್ಯೆ ಇಲ್ಲದಂತೆ ನೋಡಕೊಂಡಿದ್ದೇವೆ. ಒಂದು ತಿಂಗಳಿಗೆ ಬೇಕಾದ ಕಲ್ಲಿದ್ದಲು ಸಂಗ್ರಹದಲ್ಲಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದ 3 ಕಲ್ಲಿದ್ದಲು ಘಟಕಗಳಿಂದ ಕಲ್ಲಿದ್ದಲು ಬರುತ್ತಿದೆ. ಕ್ಯಾಪ್ಟಿವ್ ಮೈನಿಂಗ್‌ನಿಂದಲೂ ಕಲ್ಲಿದ್ದಲು ಬರ್ತಿದೆ. ಪ್ರಸ್ತುತ 14 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದೆ,”ಎಂದು ಸಚಿವರು ವಿವರ ನೀಡಿದರು.
ಸಭೆಯಲ್ಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್, ಹಂಪಯ್ಯ ನಾಯಕ್, ಮಾನಪ್ಪ ವಜ್ಜಲ್, ಬಸವರಾಜ್ ತುರುವಿನಹಾಳ್, ವಿಧಾನ ಪರಿಷತ್ ಸದಸ್ಯ ವಸಂತಕುಮಾರ್, ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.