ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದಿದ್ದು, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜು.6ರಿಂದ ಜು.8ರವರೆಗೆ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ ಅರ್ಲಟ್ ನೀಡಲಾಗಿದೆ. ಇದೇ ವೇಳೆ 55 ಕಿ.ಮೀ.ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಳಗಾವಿ, ಧಾರವಾಡದಲ್ಲಿ ಮುಂದಿನ ನಾಲ್ಕು ದಿನ, ಹಾವೇರಿಯಲ್ಲಿ ಜು.6ರಿಂದ ಜು.8ರವರೆಗೆ ಯೆಲ್ಲೋ ಅರ್ಲಟ್ ಇರಲಿದೆ. ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಸಾಧಾರಣ ಮಳೆ ಇರಲಿದೆ.
ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಚುರುಕಾಗಿದೆ. ಕರಾವಳಿ, ಮಲೆನಾಡಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ. ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ರಾಜ್ಯ ಹವಾಮಾನ ಇಲಾಖೆ ಹಿರಿಯ ಅಧಿಕಾರಿ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಸಮುದ್ರದಲ್ಲಿ ಎತ್ತರ ಅಲೆಗಳು ಏಳುವ ಹಿನ್ನೆಲೆಯಲ್ಲಿ ಮೀನುಗಾರಿಕೆ ನಡೆಸದಂತೆ, ಸಮುದ್ರ ದಡದಲ್ಲಿ ಪ್ರವಾಸಿಗರ ತೆರಳದಂತೆ ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.



