ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು (ಜೂನ್ 13) ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಸರ್ಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿದೆ. ರಾಜ್ಯದಲ್ಲಿ ಏಳನೇ ವೇತನ ಆಯೋಗದ ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಈ ಮೂಲಕ ಲೋಕಸಭೆ ಚುನಾವಣೆ ನಂತರ 7ನೇ ವೇತನ ಆಯೋಗ ಜಾರಿಗೆ ಬರುತ್ತೆ ಎಂದು ಕಾಯುತ್ತಿದ್ದ ಸರ್ಕಾರಿ ನೌಕರರಿಗೆ ಬೇಸರ ಮೂಡಿಸಿದೆ.
ಲೋಕಸಭೆ ನೀತಿ ಸಂಹಿತಿ ಮುಗಿದ ನಂತರ ಏಳನೇ ವೇತನ ಆಯೋಗದ ಜಾರಿ ಕುರಿತು ಸರ್ಕಾರಿ ನೌಕರರು ಭಾರಿ ನಿರೀಕ್ಷೆಯಲ್ಲಿದ್ದರು. ಈಗ ಲೋಕಸಭೆ ನೀತಿ ಸಂಹಿತಿ ಹಿಂಪಡೆದಿದ್ದು, ಇಂದು ಸಚಿವ ಸಂಫುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡದಿರುವುದು ನಿರಾಸೆಯಾದಂತಾಗಿದೆ.
ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಕಾನೂನು, ನ್ಯಾಯ, ಮಾನವಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಸುದ್ದಿಗೋಷ್ಠಿ ನಡೆಸಿ, ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ಕುರಿತು ಮಾಹಿತಿ ನೀಡಿದರು. ಇದರಲ್ಲಿ 7 ನೇ ವೇತನ ಆಯೋಗ ಜಾರಿ ಮತ್ತು ವೇತನ ಪರಿಷ್ಕರಣೆ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ.
ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 2022ರ ನವೆಂಬರ್ 19ರಂದು 7ನೇ ವೇತನ ಆಯೋಗ ರಚಿಸಲಾಗಿತ್ತು. 6 ತಿಂಗಳು ಗಡುವು ನೀಡಲಾಗಿತ್ತು. ಈ ಅವಧಿಯಲ್ಲಿ ಸರ್ಕಾರ ಶೇ 17ರಷ್ಟು ಮಧ್ಯಂತರ ಪರಿಹಾರ ಘೋಷಿಸಿತ್ತು. ಅದಕ್ಕಾಗಿ ವಾರ್ಷಿಕ 10 ಸಾವಿರ ಕೋಟಿ ರೂ ಹೆಚ್ಚುವರಿ ನೀಡಲಾಗಿತ್ತು. ಅವಧಿಯನ್ನು 2023 ಮೇ 15ರಿಂದ ನವೆಂಬರ್ 18ರವರೆಗೆ ವಿಸ್ತರಿಸಲಾಗಿತ್ತು. ನಂತರ 2ನೇ ಬಾರಿ 2024 ಮಾರ್ಚ್ 15ರವರೆಗೆ ವಿಸ್ತರಿಸಲಾಗಿತ್ತು.ಆಯೋಗ ಅಧ್ಯಕ್ಷ ಮತ್ತು ಸದಸ್ಯರು ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ್ದಾರೆ. ರಾಜ್ಯದ 7ನೇ ವೇತನ ಆಯೋಗವು ಇಂದು ವರದಿಯನ್ನು ಸಲ್ಲಿಸಿದ್ದು ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ.



