ದಾವಣಗೆರೆ: ಕುರಿಗೆ ಸೊಪ್ಪು ತರಲು ಹೋಗಿದ್ದ ಕುರಿಗಾಹಿಗೆ ವಿದ್ಯುತ್ ಶಾಕ್ ಹೊಡೆದಿದ್ದು, ಮರದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹೊಸಪಾಳ್ಯ ಗ್ರಾಮದ ಮಳಲಹಳ್ಳಿ ರಸ್ತೆಯಲ್ಲಿ ನಡೆದಿದೆ.
ಕೊಟ್ರೇಶ್ (21) ಮೃತ ವ್ಯಕ್ತಿಯಾಗಿದ್ದು, ಮರವನ್ನೇರಿ ಕುರಿಗಳಿಗೆ ಸೊಪ್ಪು ಕಡಿಯುತ್ತಿದ್ದಾಗ ಆಕಸ್ಮಿಕ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ. ಸೊಪ್ಪು ಕಡಿಯುತ್ತಿದ್ದ ಮರದಲ್ಲಿ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಇದನ್ನು ಗಮನಿಸದ ಕುರಿಗಾಹಿ ಕೊಟ್ರೇಶ್ ಎಂದಿನಂತೆ ಬೆಳಿಗ್ಗೆ ಕುರಿಗಳಿಗೆ ಸೊಪ್ಪು ಕಡಿಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮೃತ ವ್ಯಕ್ತಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರಿದ್ದಾರೆ. ಇವರು ಮೂಲತಃ ಹಾನಗಲ್ ತಾಲ್ಲೂಕು ಮಾಸ್ತಿಕಟ್ಟೆ ಗ್ರಾಮದವರು. ತುಂಬಾ ಹೊತ್ತು ಕಳೆದರು ಬಾರದೆ ಇದ್ದಾಗ ಅವರ ತಂದೆ ಹುಟುಕಾಟ ನಡೆಸಿದರು. ಆಗ ಮರದ ಮೇಲೆಯೇ ಮೃತಪಟ್ಟಿರುವುದು ಗೊತ್ತಾಗಿದೆ. ಮಲೆಬೆನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.