ದಾವಣಗೆರೆ: ದಾವಣಗೆರೆ ಲೋಕಸಭಾ ಚುನಾವಣೆ ರಣಕಣ ರಂಗೇರಿದೆ. ಬಿಜೆಪಿ ಬೃಹತ್ ರೋಡ್ ಶೋ ಮೂಲಕ ಶುಕ್ರವಾರ ಶಕ್ತಿ ಪ್ರದರ್ಶನ ಮಾಡಿದೆ. ಎಲ್ಲಿ ನೋಡಿದರೂ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಬಾವುಟ…, ಪ್ರಧಾನಿ ಮೋದಿ, ಗಾಯಿತ್ರಿ ಸಿದ್ದೇಶ್ವರ್ ಪರ ಜೈಯ ಘೋಷ ಕೂಗಿದರು… ಈ ಮೂಲಕ ಬಿಜೆಪಿ ನಾಯಕರು ತಮ್ಮಲ್ಲಿನ ಭಿನ್ನಮತ ಮರೆತು ಎಲ್ಲರು ಒಗ್ಗಟು ಪ್ರದರ್ಶಿಸಿದರು. ಇದರೊಂದಿಗೆ ಗಾಯಿತ್ರಿ ಸಿದ್ದೇಶ್ವರ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.
ರೋಡ್ ಶೋ ನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಿಲ್ಲಾಧ್ಯಕ್ಷ ರಾಜಶೇಖರ್ ರವರು, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಬಿ. ಸಿ. ಪಾಟೀಲ್ , ಮಾಧುಸ್ವಾಮಿ, ಭೈರತ್ತಿ ಬಸವರಾಜ, ಕರಣಕರ ರೆಡ್ಡಿ , ಜನಾರ್ದನ ರೆಡ್ಡಿ, ಎಂ. ಎಲ್.ಸಿ. ರವಿಕುಮಾರ್, ಶಾಸಕ ಬಿ. ಪಿ. ಹರೀಶ್ , ಮಾಜಿ ಶಾಸಕರಾದ ಎಸ್. ಎ. ರವೀಂದ್ರನಾಥ, ಪ್ರೊ. ನಿಂಗಣ್ಣ, ಎಸ್. ವಿ. ರಾಮಚಂದ್ರಪ್ಪ , ಬಸವರಾಜ್ ನಾಯ್ಕ್ , ಶ್ ಎಚ್ , ಮಾಡಳ್ ಮಲ್ಲಿಕಾರ್ಜುನ್ , ಶಿವಕುಮಾರ್, ಅಜಯ್ ಕುಮಾರ್ , ಅನಿತ್ ಕುಮಾರ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿದ ಗಾಯಿತ್ರಿ ಸಿದ್ದೇಶ್ವರ ಅವರು ದುರ್ಗಾಂಬಿಕಾ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗೆ ಪ್ರಾರ್ಥಿಸಿದರು. ಮೆರವಣಿಗೆ ಆರಂಭವಾಗುತ್ತಿದ್ದಂತೆ ಮೋದಿ ಅವರ ಪರವಾಗಿ ಜೈಕಾರ ಮುಗಿಲುಮುಟ್ಟಿತ್ತು. ಪಿ. ಬಿ. ರಸ್ತೆಗೆ ಮೆರವಣಿಗೆ ಬಂದವಷ್ಟರಲ್ಲಿ ಕೇಸರಿ ಮಯವಾಗಿತ್ತು. ಬೆಳಿಗ್ಗೆ ಮೂರು ಸ್ಥಳಗಳಿಂದ ಏಕಕಾಲಕ್ಕೆ ಮೆರವಣಿಗೆ ಆರಂಭವಾಯಿತು. ಹಳೇಪೇಟೆ ದುಗ್ಗಮ್ಮ ದೇವಿ ದೇವಾಲಯದಿಂದ ಒಂದು ತಂಡ, ನಿಟುವಳ್ಳಿಯ ದುರ್ಗಾಂಬಿಕಾ ದೇವಿ ದೇವಾಲಯದಿಂದ ಒಂದು ತಂಡ, ರಾಮ್ ಅಂಡ್ ಕೋ ವೃತ್ತದಿಂದ ಒಂದು ತಂಡ ಮೆರವಣಿಗೆ ಮೂಲಕ ಸಾಗಿತು.
ಹಳೇಪೇಟೆಯಿಂದ ಬಿಜೆಪಿ ಅಭ್ಯರ್ಥಿ ರೈತ ಮಹಿಳೆ ಗಾಯಿತ್ರಿ ಸಿದ್ದೇಶ್ವರ್ ದುಗ್ಗಮ್ಮ ದೇವಿಗೆ ಪೂಜೆ ಸಲ್ಲಿಸಿ ಮರವಣಿಗೆ ಆರಂಭಿಸಿದರೆ, ಮೆರವಣಿಗೆಯು ಎಸ್.ಕೆ.ಪಿ. ರಸ್ತೆ, ಕಾಯಿ ಪೇಟೆ, ಗಡಿಯಾರ ಕಂಬ, ರೈಲ್ವೆ ಮೇಲ್ಸೇತುವೆ, ಸಹಕಾರಿ ಬಸ್ ನಿಲ್ದಾಣ, ಗುಂಡಿ ಸರ್ಕಲ್ ಮೂಲಕ ಹಳೇ ವಾಣಿ ಹೋಂಡಾ ಶೋ ರೂಂ ತಲುಪಿತು.
ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ನೇತೃತ್ವದ ತಂಡ ನಿಟುವಳ್ಳಿ ದುರ್ಗಾಂಬಿಕಾ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಿಸಿತು. ದುರ್ಗಾಂಬಿಕಾ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ಎಚ್.ಕೆ.ಆರ್.ವೃತ್ತ, ಕೆಟಿಜೆ ನಗರ 1ನೇ ಮೇನ್, ಜಯದೇವ ವೃತ್ತ, ಲಾಯರ್ ರಸ್ತೆ, ಜನತಾ ಹೊಟೆಲ್ ರಸ್ತೆ, ಗಾಂಧಿ ಸರ್ಕಲ್, ಅರುಣಾ ಚಿತ್ರ ಮಂದಿರದ ಮೂಲಕ ಹಳೇ ವಾಣಿ ಹೋಂಡಾ ಶೋರೂಂ ತಲುಪಿತು.
ಹರಿಹರ ಶಾಸಕ ಬಿ.ಪಿ.ಹರೀಶ್, ಜೆಡಿಎಸ್ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ನೇತೃತ್ವದ ತಂಡ ರಾಮ್ ಅಂಡ್ ಕೋ ವೃತ್ತದಿಂದ ಮೆರವಣಿಗೆ ಆರಂಭಿಸಿತು. ರಾಮ್ ಅಂಡ್ ಕೋ ಸರ್ಕಲ್, ಅಂಬೇಡ್ಕರ್ ಸರ್ಕಲ್, ಜಯದೇವ ವೃತ್ತ, ಗಾಂಧಿವೃತ್ತದ ಮೂಲಕ ಹಳೇ ವಾಣಿ ಹೋಂಡಾ ಶೋ ರೂಂ ತಲುಪಿತು.



