ಬೆಂಗಳೂರು: ಸಹಕಾರಿ ಸಂಘದ ಸದಸ್ಯರು, ರೈತರಿಗೆ 5 ಲಕ್ಷ ವರೆಗೆ ಆರೋಗ್ಯ ಶಸ್ತ್ರಚಿಕಿತ್ಸೆ ವೆಚ್ಚ ನೀಡುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೊಸ ಸದಸ್ಯರ ನೋಂದಣಿ ಮತ್ತು ನವೀಕರಣಕ್ಕೆ ಮಾರ್ಚ್ 31ರವರೆಗೆ ಅವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಲಾಗಿದೆ. ಇದರಿಂದ ಯಶಸ್ವಿನಿ ಕಾರ್ಡ್ ಮಾಡಿಸದೆ ಇರುವವರು ಈ ಯೋಜನೆಗೆ ತಮ್ಮ ಹೆಸರನ್ನುನೊಂದಾಯಿಸಿಕೊಳ್ಳಬಹುದಾಗಿದೆ.
ರಾಜ್ಯದ ಸರ್ಕಾರವು ಈ ಹಿಂದೆ ಇದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸಹಕಾರ ಸಂಘದ ಅಡಿಯಲ್ಲಿ ಮರುಜಾರಿಗೊಳಿಸಿದ್ದು, 2023-24ನೇ ಸಾಲಿಗೆ ಈಗಾಗಲೇ ಸದಸ್ಯರ ನೋಂದಣಿಗೆ ಅವಕಾಶ ನೀಡಿದ್ದು, ಸದಸ್ಯರ ನೋಂದಾವಣೆಗೆ ಫೆಬ್ರವರಿ 28 ಕೊನೆಯ ದಿನಾಂಕವಾಗಿತ್ತು. ಆದರೆ, ಯೋಜನೆಗೆ ಇನ್ನೂ ಹೆಚ್ಚಿನ ಸದಸ್ಯರನ್ನು ನೋಂದಾಯಿಸಿಕೊಳ್ಳಲು ಅನುಕೂಲ ಆಗುವಂತೆ ನೋಂದಣಿ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಲಾಗಿದೆ.
ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ಅಡಿಯಲ್ಲಿ ಸುಮಾರು 30ಲಕ್ಷಕ್ಕೂ ಅಧಿಕ ಸದಸ್ಯರ ನೋಂದಣಿ ಗುರಿ ಹೊಂದಿದ್ದಾರೆ. ಆದರೆ ಸದಸ್ಯರ ನೋಂದಣಿ ನಿರೀಕ್ಷಿಸಿದ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ಎಲ್ಲಾ ಸಂಘದ ಸದಸ್ಯರುಗಳ ನೋಂದಣಿ ಸಾಧ್ಯ ಆಗುವುದಿಲ್ಲ ಎಂದು ಹಾಗೂ ಅನೇಕ ಸಹಕಾರಿ ಸಂಘಗಳು, ಸದಸ್ಯರುಗಳು, ಶಾಸಕರು, ವಿಧಾನಸಭೆ ಹಾಗೂ ಪರಿಷತ್‌ನ ಸದಸ್ಯರುಗಳೂ ಕೂಡ ಯೋಜನೆಯ ನೋದಣಿಯ ಅವಧಿಯನ್ನು ವಿಸ್ತರಣೆ ಮಾಡುವಂತೆ ಈಗಾಗಲೇ ಮನವಿ ಸಲ್ಲಿಕೆ ಮಾಡುತ್ತಾರೆ.ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಅಲ್ಲದೇ ಗ್ರಾಮೀಣ ಸಹಕಾರ ಸಂಘ/ಬ್ಯಾಂಕುಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಯೋಜನೆಯ ಫಲಾನುಭವಿ ಆಗಬಹುದಾಗಿದೆ.



