ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು 15ನೇ ಆಯವ್ಯಯ ಮಂಡಿಸಿದರು. ಬಜೆಟ್ ಮಂಡನೆ ಆರಂಭದಲ್ಲಿ ಕೇಂದ್ರ ಸರ್ಕಾರದ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಸಿಎಂ ಟೀಕಿಸಿದರು.
ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದಕ್ಕೆ ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಬಜೆಟ್ ಅನ್ನು ಕೇಂದ್ರದ ವಿರುದ್ಧ ಟೀಕೆಗೆ ಬಳಸಿಕೊಳ್ಳುತ್ತೀರಾ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದರು. ಈ ವೇಳೆ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸ್ಪೀಕರ್ ಯುಟಿ ಖಾದರ್ ಪರಿಪರಿಯಾಗಿ ಬೇಡಿಕೊಂಡರೂ ಪ್ರತಿಪಕ್ಷ ನಾಯಕರು ಆಕ್ರೋಶದ ಮಾತುಗಳನ್ನು ಕಡಿಮೆ ಮಾಡಲಿಲ್ಲ.
ವಿಪಕ್ಷ ಬಿಜೆಪಿ ನಾಯಕರು ಬಜೆಟ್ಗೆ ಬಹಿಷ್ಕಾರ ಹಾಕಿ ಹೊರನಡೆದರು. ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು, ‘ಏನಿಲ್ಲಾ ಏನಿಲ್ಲಾ, ಬುರುಡೆ ಬುರುಡೆ’ ಎಂದು ಕೂಗುತ್ತಾ ಸಭಾತ್ಯಾಗ ಮಾಡಿದರು. ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರು ಪೋಸ್ಟರ್ ಅಂಟಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು ಸೀಮಿತವಾಗಿರುವುದಿಲ್ಲ ಎಂದ ಸಿದ್ದರಾಮಯ್ಯ ಬಜೆಟ್ ಮಂಡನೆಯ ಆರಂಭದಲ್ಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳ ಟೀಕೆಯನ್ನು ಉಲ್ಲೇಖಿಸಿದರು. ಬಜೆಟ್ನ ಒಟ್ಟು ಗಾತ್ರ 3,71,383 ಕೋಟಿ ರೂ. ಎಂದು ತಿಳಿಸಿದರು
ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
2023-24ರಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು 2ನೇ ಸ್ಥಾನದಲ್ಲಿದೆ. ಜನವರಿ ತಿಂಗಳ ಅಂತ್ಯದವರೆಗು 58,180 ಕೋಟಿ ರೂ.ಗಳ SGST ತೆರಿಗೆ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.14 ರಷ್ಟು ಬೆಳವಣಿಗೆಯಾಗಿರುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ರೂಪಿಸಿರುವ ಗ್ಯಾರಂಟಿ ಯೋಜನೆಗಳು ಚುನಾವಣಾ ಗಿಮಿಕ್ಗಳಲ್ಲ. ಬಡವರ ಏಳಿಗೆಗಾಗಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೈಗೊಂಡಿದೆ. ಗ್ಯಾರಂಟಿ ಜಾರಿಗಾಗಿ ಇಡೀ ಜಗತ್ತು ನಮ್ಮತ್ತ ತಿರುಗಿ ನೋಡುತ್ತಿವೆ. ಹಲವು ದೇಶಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ನಮ್ಮ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಿವ ಎಂದು ತಿಳಿಸಿದರು.