ಡಿವಿಜಿ ಸುದ್ದಿ, ದಾವಣಗೆರೆ : ಜಮೀನಿನ ಮಾಲೀಕನ ಅಜಾಗರೂಕತೆಯಿಂದ 35 ಮರಗಳ ಮಾರಣಹೋಮ ನಡೆದಿದೆ. ಲೋಕಿಕೆರೆ ಸಮೀಪದ ಕುಂಟಪಾಲನಹಳ್ಳಿಯಲ್ಲಿ ಈ ಕೃತ್ಯ ನಡೆದಿದೆ. ಗ್ರಾಮಸ್ಥರು ನೀಡಿದ ದೂರಿನಿಂದ ಕೂಡಲೇ ಎಚ್ಚೆತ್ತ ಅರಣ್ಯ ಅಧಿಕಾರಿಗಳು 15 ಸಾವಿರ ದಂಡ ವಿಧಿಸಿದ್ದಾರೆ.
ತಾಲ್ಲೂಕಿನ ಲೋಕಿಕೆರೆ ಸಮೀಪದ ಕುಂಟಪಾಲನಹಳ್ಳಿ ಗ್ರಾಮದ ನಾರಾಯಣ ಎಂ. ಎಂಬುವರಿಗೆ ಸೇರಿದ ಜಮೀನಿನ ಪಕ್ಕದ ರಸ್ತೆ ಬದಿಯಲ್ಲಿ ನಳನಳಿಸುತ್ತಿದ್ದ 35 ಮರಗಳ ಮಾರಣಹೋಮವಾಗಿದೆ. ಅರಣ್ಯ ಇಲಾಖೆ ನೆಟ್ಟು ಬೆಳೆಸಿದ, ಎಂಟರಿಂದ ಹತ್ತು ವರ್ಷಗಳ ಸುಮಾರು 35 ಸಾಲು ಮರಗಳು ನೆಲಕ್ಕುರುಳಿವೆ.
ವಿದ್ಯುತ್ ಲೈನ್ ಗೆ ಮರದ ರೆಂಬೆಗಳು ಅಡ್ಡಲಾಗಿವೆ ಎಂದು ಜಮೀನ ಮಾಲೀಕ ಬೆಸ್ಕಾಂಗೆ ದೂರು ನೀಡಿದ್ದಾರೆ. ಇದಕ್ಕೆ ಬೆಸ್ಕಾಂ ಅಧಿಕಾರಿಗಳು ಮರದ ರೆಂಬೆ ಕಡಿಯುವಂತೆ ಸೂಚನೆ ನೀಡಿದ್ದಾರೆ. ಆದರೆ, ಜಮೀನಿನ ಮಾಲೀಕ ರೆಂಬೆ ಕಟ್ ಮಾಡುವ ಬದಲು ಇಡೀ ಮರಗಳನ್ನೇ ಕಟ್ ಮಾಡಿಸಿದ್ದಾನೆ.
ಇದನ್ನು ಕಂಡ ಗ್ರಾಮದ ಶ್ರೀನಿವಾಸ್, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಾಲು ಮರದ ವೀರಾಚಾರಿ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಜಮೀನ ಮಾಲೀಕನಿಗೆ 15 ಸಾವಿರ ದಂಡ ವಿಧಿಸಿದ್ದಾರೆ.
ಪರಿಸರ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರು. ಇಂತಹ ಕೃತ್ಯಗಳು ನಡೆಯುತ್ತಾಲೇ ಇರುತ್ತವೆ. ಈ ರೀತಿಯ ಕುಕೃತ್ಯಗಳು ಮುಂದೆ ನಡೆಯದಂತೆ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ರಾಜ್ಯಪ್ರಶಸ್ತಿ ಪುರಸ್ಕೃತ ವೀರಾಚಾರಿ ಆಗ್ರಹಿಸಿದ್ದಾರೆ.
ಇರುವಂತಹ ಅರಣ್ಯವನ್ನು ನಾಶ ಮಾಡಿ ಉಳುಮೆ ಮಾಡುತ್ತಿದ್ದೇವೆ. ಆದರೆ, ರಸ್ತೆಯ ಬದಿಯಲ್ಲಿ ಹಾಕಿದ ಮರಗಳನ್ನು ಈ ರೀತಿ ಕಡಿದು ಹಾಕಿದರೆ ಪರಿಸರ ಸಂರಕ್ಷಣೆ ಹೇಗೆ ಸಾಧ್ಯವಾಗುತ್ತೇ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿ ಗೋಪಾಲಗೌಡ ಒತ್ತಾಯಿಸಿದ್ದಾರೆ.
ಈ ಬಗ್ಗೆ ಡಿವಿಜಿ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಜಮೀನ ಮಾಲೀಕ ನಾರಾಯಣ ಎಂ, ನಮ್ಮ ಹೊಲದಲ್ಲಿ ವಿದ್ಯುತ್ ಲೈನ್ ಗಳು ಒಂದಕ್ಕೊಂದು ತಗುಲಿ ಬೆಂಕಿ ಕಿಡಿ ಹೊತ್ತಿತ್ತು. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದೆ. ಅವರು ರೆಂಬೆ ತಗೆಸುವಂತೆ ಸೂಚನೆ ನೀಡಿದ್ದರು. ಅದಕ್ಕೆ ನಾವು ನೀವೆ ತಗೆಸಿ ಎಂದು ಹೇಳಿದ್ದೇ. ಅದಕ್ಕೆ ಅವರು, ಮರ ಕಟ್ ಮಾಡುವನನ್ನು ಕಳಿಸುತ್ತೇವೆ ನೀವೇ ನಿಂತಿದ್ದು ಕಟ್ ಮಾಡಿಸಿ ಎಂದು ಹೇಳಿದ್ದರು. ಆದರೆ, ಆ ದಿನ ನಾನು ಕೂಡ ಊರಿನಲ್ಲಿ ಇರಲಿಲ್ಲ. ಬೆಸ್ಕಾಂ ಅಧಿಕಾರಿಗಳು ಮರ ಕಟ್ ಮಾಡುವವರು ಬಂದಿದ್ದಾರೆ ಎಂದು ಫೋನ್ ಮಾಡಿದರು. ಸರಿ, ರೆಂಬೆ ಕಟ್ ಮಾಡುವಂತೆ ಹೇಳಿದ್ದೆ. ಆದರೆ, ಇಂತಹ ತಪ್ಪು ಆಗುತ್ತದೆ ಎಂದುಕೊಂಡಿರಲಿಲ್ಲ. ಈ ಕೃತ್ಯ ನೋಡಿ ನನಗೂ ಬೇಸರವಾಗಿದೆ. ಮುಂದಿನ ದಿನಗಳಲ್ಲಿ ಕಟ್ ಮಾಡಿದ ಮರದ ಮಧ್ಯೆ ನಾನೇ ಖುದ್ದಾಗಿ ಸಸಿ ತಂದು ಸಾಕುತ್ತೇನೆ ಎಂದು ತಿಳಿಸಿದರು.