ಡಿವಿಜಿ ಸುದ್ದಿ, ದಾವಣಗೆರೆ: ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಮುಂದುವರೆದಿದ್ದು, ಎಲ್ಲಾ ಕ್ಷೇತ್ರದಲ್ಲಿ ವಿಜ್ಞಾನದ ಅವಶ್ಯಕತೆ ಇದೆ. ಆದ್ದರಿಂದ ಪ್ರತಿಯೊಬ್ಬರಿಗೂ ವಿಜ್ಞಾನದ ಅರಿವು ಇರಬೇಕು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ದಾವಣಗೆರೆ, ಡಿ.ಎಸ್.ಇ.ಆರ್.ಟಿ, ಬೆಂಗಳೂರು ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ದಾವಣಗೆರೆ ಇವರ ಸಹಯೋಗದಲ್ಲಿ ಜ.27 ರಂದು ಶಾಮನೂರು ಬೈಪಾಸ್ ಬಳಿ ಇರುವ ಜೈನ್ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಇನ್‍ಸ್ಪೈರ್ ಅವಾರ್ಡ್ 2019-20 (ಡಿಎಲ್‍ಇಪಿಸಿ-10) ವಿಜ್ಞಾನ ವಸ್ತುಪ್ರದರ್ಶನ ಮತ್ತು ಪ್ರಾಜೆಕ್ಟ್ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರವಗಳು ಮತ್ತು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಸ್ವರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನ ಪಡೆಯುವುದಲ್ಲ. ಸರಳವಾದ ವಿಜ್ಞಾನ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದ ಅವರು ಇಂದು 350 ವಿದ್ಯಾರ್ಥಿಗಳು ಈ ಇನ್‍ಸ್ಪೈರ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಮಾತನಾಡಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ತ್ರಿವೇಣಿ ಸಂಗಮದಂತೆ ಇರಬೇಕು. ವಿದ್ಯಾರ್ಥಿಗಳಲ್ಲಿರುವ ವಿಜ್ಞಾನದ ಆಸಕ್ತಿಯನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಬೇಕು. ವಿಜ್ಞಾನ ಸದಾ ಮುಂದುವರೆಯುತ್ತಿರುತ್ತದೆ. ಆದ್ದರಿಂದ ಮಕ್ಕಳಲ್ಲಿರುವ ವಿಜ್ಞಾನದ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಭವಿಷ್ಯದಲ್ಲಿ ಮಕ್ಕಳು ಉತ್ತಮ ವಿಜ್ಞಾನಿಗಳಾಗುತ್ತಾರೆ ಎಂದರು.
ಜಿ.ಪಂ ನ ಮಾಜಿ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ವಿಜ್ಞಾನದ ಅವಶ್ಯಕತೆ ಇದೆ. ಇಂದು ಆಕ್ಸಿಜನ್‍ನಷ್ಟೇ ವಿಜ್ಞಾನ ಮುಖ್ಯವಾಗಿದೆ. ಆರ್ಥಿಕತೆ, ಶೈಕ್ಷಣಿಕ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ವಿಜ್ಞಾನದ ಪಾತ್ರ ಮಹತ್ವದ್ದಾಗಿದೆ ಎಂದರು.
ಡಯಟ್‍ನ ಉಪನಿರ್ದೇಶಕ ಹಾಗೂ ಪ್ರಾಂಶುಪಾಲರಾದ ಲಿಂಗರಾಜು ಹೆಚ್.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಲು ಇನ್‍ಸ್ಪೈಯರ್ ಅವಾರ್ಡ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. 3,600 ವಿದ್ಯಾರ್ಥಿಗಳನ್ನು ಇನ್ಸ್‍ಪೈಯರ್ ಪ್ರಯೋಗಕ್ಕೆ ನೋಂದಣಿ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಕೇವಲ 1,962 ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಪ್ರಾಯೋಗಿಕವಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಪೈಕಿ ಶೇ.20 ರಷ್ಟು ಕರ್ನಾಟಕದ ವಿದ್ಯಾರ್ಥಿಗಳಾಗಿದ್ದಾರೆ ಎಂಬುದು ಸಂತಸದ ಸಂಗತಿಯಾಗಿದೆ. ರಾಜ್ಯಮಟ್ಟದಲ್ಲಿ ಶೇ. 5 ರಷ್ಟು ವಿದ್ಯಾರ್ಥಿಗಳು ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳು ಎಂಬುದು ಕೂಡ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ, ಡಯಟ್‍ನ ನೋಡಲ್ ಅಧಿಕಾರಿ ಉಮೇಶ್ ಬಾಂಭೋರೆ, ಎನ್‍ಐಎಫ್‍ನ ಚಂದನ್‍ಗೌತಮ್, ಜೈನ್ ವಿದ್ಯಾಲಯದ ಉಪಾಧ್ಯಾಕ್ಷ ರಮೇಶ್ ಮಲ್ಲ್, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಘದ ಅಧ್ಯಕ್ಷ ಹಾಲಪ್ಪ, , ಬಿಐಇಟಿ ಕಾಲೇಜಿನ ಪ್ರಾಧ್ಯಾಪಕ ವಾಸುದೇವ್, ಡಯಟ್‍ನ ಉಪನ್ಯಾಸಕಿ ತ್ರಿವೇಣಿ ಎನ್.ವೈ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು