ದಾವಣಗೆರೆ; ಸಿಎಂ ಸಿದ್ದರಾಮಯ್ಯ ಫೆ.3ರಂದು ದಾವಣಗೆರೆ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಿಎಂ ಆಗಮಿಸುವ ಸ್ಥಳ ಪರಿಶೀಲನೆ ನಡೆಸಲಾಯಿತು. ಸಿಎಂ ಮೊದಲು ದಾವಣಗೆರೆಯಲ್ಲಿ ರಾಜ್ಯ ಪತ್ರಕರ್ತರ ಸಮ್ಮೇಳ ಉದ್ಘಾಟಿದಲಿದ್ದು, ನಂತರ ಹೊನ್ನಾಳಿಯ ಟಿ.ಬಿ. ವೃತ್ತದಲ್ಲಿನ ಕನಕದಾಸರ ಕಂಚಿನ ಪ್ರತಿಮೆ ಅನಾವರಣಗೊಳಿಸಲಿದ್ದಾರೆ.
ಫೆ.3ರಂದು ಮಧ್ಯಾಹ್ನ 3 ಗಂಟೆಗೆ ಹೊನ್ನಾಳಿಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು, ಕನಕಪ್ರತಿಮೆ ಆವರಣ, ಟಿ.ಬಿ.ಶಾಲೆ ಹಿಂಭಾಗದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮ ಹಾಗೂ ಹೆಲಿಪ್ಯಾಡ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಫೆ.3ರಂದು ದಾವಣಗೆರೆಯಲ್ಲಿ ಎರಡು ದಿನದ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಹೊನ್ನಾಳಿಗೆ ಆಗಮಿಸಿ ಕನಕ ಪ್ರತಿಮೆ ಅನಾವರಣಗೊಳಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಝಡ್ ಪ್ಲಸ್ ಭದ್ರತೆ ಇರುವುದರಿಂದ ಸಕಲ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮ ನಡೆಯುವ ಸುತ್ತ ಮುತ್ತ ಪ್ರದೇಶ, ಕನಕ ಪ್ರತಿಮೆ ಅನಾವರಣ ಮಾಡುವ ಸ್ಥಳ ಮತ್ತು ಹೆಲಿಕಾಫ್ಟರ್‌ನಿಂದ ಇಳಿದು ಕಾರಿನಲ್ಲಿ ಬರುವ ದಾರಿ ತಪಾಸಣೆ ಮಾಡಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ಪಟ್ಟರಾಜಗೌಡ, ಪೊಲೀಸ್ ಇನ್ಸ್‍ಪೆಕ್ಟರ್ ಸುನಿಲ್‍ಕುಮಾರ್, ಮುಖ್ಯಾಧಿಕಾರಿ ನಿರಂಜನಿ, ಕುರುಬ ಸಮಾಜದ ಮುಖಂಡರು ಇದ್ದರು.