ಡಿವಿಜಿ ಸುದ್ದಿ, ರಾಮನಗರ: ಮಂಗಳೂರು ಬಾಂಬ್ ಪತ್ತೆ ಪ್ರಕರಣದಲ್ಲಿ ನಾನು ಹೇಳಿದ ಮಿಣಿ ಮಿಣಿ ಪೌಡರ್ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣದಲ್ಲಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ ಕಾರ್ಯಕರ್ತರ ವಿಕೃತಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದುಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ದೊಡ್ಡ ಕಂಟೈನರ್‌ನಲ್ಲಿ ಬಾಂಬ್ ಇದೆ. ಸಾವಿರಾರು ಜನ ಸಾಯುತ್ತಾರೆ ಎಂದಿದ್ದರು. ಒಂದು ಸಮಾಜದ ಬಗ್ಗೆ ದೋಷ ತೋರಿಸಬೇಕು ಎನ್ನುವುದು ಅವರ ಮನಸ್ಸಿನಲ್ಲಿ ಇತ್ತು.ಈಗ ಅದು ಸಾಧ್ಯವಾಗಿಲ್ಲ. ಹೀಗಾಗಿ ಅದನ್ನು ಮುಚ್ಚಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಈ ಕಥೆ ಕಟ್ಟುತ್ತಿ ಜನರ ದಾರಿ ತಪ್ಪಿಸುತ್ತಿದ್ದಾರೆ.
ಬಾಂಬ್ ಪ್ರಕರಣದಲ್ಲಿ ಮಾಧ್ಯಮಗಳ ವರದಿ ಆಧರಿಸಿ ಪಟಾಕಿ ಪೌಡರ್ ಕುರಿತು ನಾನು ಹೇಳಿದ್ದೆ. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳೂ ಮಾಧ್ಯಮಗಳ ದಾರಿ ತಪ್ಪಿಸಿದರು. ನಾನು ಕಥೆ ಕಟ್ಟಿ ಹೇಳುತ್ತಿಲ್ಲ. ಮಾಧ್ಯಮ ವರದಿ ಆಧರಿಸಿ ಹೇಳಿಕೆ ಕೊಟ್ಟಿದ್ದೇನೆ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದರು.