ದಾವಣಗೆರೆ: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ಪರಿವೀಕ್ಷಕರ ಗ್ರೂಪ್ ಸಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಜ.20, 21 ರಂದು ನಗರದ ಹದಿನಾಲ್ಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪರೀಕ್ಷಾ ಸಿದ್ದತಾ ಸಭೆಯಲ್ಲಿ ಪರೀಕ್ಷಾ ವೀಕ್ಷಕರು, ಮೇಲ್ವಿಚಾರಕರು, ಮಾರ್ಗಾಧಿಕಾರಿಗಳು ಪರೀಕ್ಷೆ ಸಂಧರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಜ.20 ರಂದು ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ. ಜ.21 ರಂದು ಬೆಳಿಗ್ಗೆ 10 ರಿಂದ 11.30 ರವರಗೆ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರಗೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ವಿಷಯದ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆಗಳಲ್ಲಿ ಎಷ್ಟೇ ಎಚ್ಚರವಹಿಸಿದರೂ ಕೆಲವು ತಪ್ಪುಗಳಾಗುತ್ತವೆ, ಹಾಗಾಗಿ ಪರೀಕ್ಷಾ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರೂ ಪರೀಕ್ಷಾ ಮಾರ್ಗಸೂಚಿಗಳನ್ನು ಸರಿಯಾಗಿ ಓದಿಕೊಂಡು ಕರ್ತವ್ಯ ನಿರ್ವಹಿಸಬೇಕು. ತಾಂತ್ರಿಕತೆ ಬಹಳ ಮುಂದುವರೆದಿದ್ದು ಪರೀಕ್ಷೆಗಳಲ್ಲಿ ತಾಂತ್ರಿಕಕತೆ ಬಳಸುವ ಅಪಾಯವಿರುಚುದರಿಂದ ಹೆಚ್ಚು ಜಾಗರೂಕರಾಗಿರಬೇಕೆಂದರು.
ಪರೀಕ್ಷಾ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ಸ್ ಸಾಧನಗಳಾದ ಮೊಬೈಲ್, ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್, ಬ್ಲೂ ಟೂತ್ ಡಿವೈಸ್, ಪೇಜರ್, ವೈರ್ಲೆಸ್, ಕ್ಯಾಲ್ಕುಲೇಟರ್, ಮೊದಲಾದ ಎಲೆಕ್ಟ್ರಾನಿಕ್ ವಸ್ತುಗಳಿಗೆ ನಿರ್ಬಂಧ. ಯಾವುದೇ ವ್ಯಕ್ತಿಗಳು ಕೇಂದ್ರದೊಳಗೆ ಇಂತಹ ವಸ್ತು ತಂದರೆ ಅವರ ಅಭ್ಯರ್ಥಿತನವನ್ನು ರದ್ದುಗೊಳಿಸಿ ಆಯೋಗ ನಡೆಸುವ ಎಲ್ಲಾ ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದೆಂದರು.
ಪರೀಕ್ಷಾ ಉಪ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು, ಪರೀಕ್ಷಾ ಉಪ ಕೇಂದ್ರಗಳ ವೀಕ್ಷಕರಿಗಳಿಗೆ ಬಾಡಿ ಕ್ಯಾಮರಾ ಒದಗಿಸಬೇಕು. ಪ್ರವೇಶ ಪತ್ರ ಮತ್ತು ಮೂಲ ಗುರುತಿನ ಚೀಟಿ ಹೊಂದಿರುವ ಅಭ್ಯರ್ಥಿಗಳಿಗೆ ಸ್ಯಾನಿಟೈಜೇಷನ್ ಮಾಡಿಸಿದ ನಂತರವೇ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡಿ, ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ನಮೂದಿಸಿದ ಆಸನದಲ್ಲಿ ಕುಳಿತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ನಾಮಿನಲ್ ರೋಲ್ನಲ್ಲಿರುವ ಫೋಟೋ ಮತ್ತು ಸಹಿಯನ್ನು ಪರಾಮರ್ಶಿಸಿ ಅಭ್ಯರ್ಥಿಯ ಗುರುತನ್ನು ಖಚಿತಪಡಿಸಿಕೊಳ್ಳಬೇಕು. ಆಸೀನರಾಗಿರುವ ಅಭ್ಯರ್ಥಿಗಳಿಗೆ ಮಾತ್ರ ಅವರದೇ ನೋಂದಣಿ ಸಂಖ್ಯೆಯುಳ್ಳ ಒ.ಎಂ.ಆರ್. ಹಾಳೆಗಳನ್ನು ನೀಡಿ ಅದರಲ್ಲಿರುವ ಅಂಕಣಗಳನ್ನು ಸೂಕ್ತವಾಗಿ ಭರ್ತಿ ಮಾಡುವಂತೆ ಕೊಠಡಿ ವೀಕ್ಷಕರು ಆಭ್ಯರ್ಥಿಗಳಿಗೆ ಸೂಚಿಸಬೇಕು. ಕೊಠಡಿ ವೀಕ್ಷಕರು ಆಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಅದರಲ್ಲಿರುವ ಸೂಚನೆಗಳನ್ನು ಓದಿಕೊಂಡ ನಂತರ ಉತ್ತರಿಸಲು ತಿಳಿಸಬೇಕು.
ಪರೀಕ್ಷಾ ಕೆಂದ್ರಗಳ ಸುತ್ತ 200 ಮೀ ನಿಷೇಧಿತ ಪ್ರದೇಶ: ದಾವಣಗೆರೆ ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ ಜ.20 ಮತ್ತು 21 ರಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರಿವೀಕ್ಷಕರ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ ನಿಷೇಧಿತ ಪ್ರದೇಶವೆಂದು ಘೋಷಿಸಿದ್ದು ಈ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಕೆಫೆಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಲು ಜಿಲ್ಲಾಧಿಕಾರಿ ಡಾ.ವೆಂಕಟೇಶ.ಎಂ.ವಿ. ಆದೇಶಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧಿಕಾರಿ ಮಂಜುನಾಥ, ಡಿಡಿಪಿಐ ಕೊಟ್ರೇಶ್, ಡಯಟ್ ಅಧಿಕಾರಿ ಗೀತಾ ಸೇರಿದಂತೆ ಪರೀಕ್ಷೆ ನಿಯೋಜಿತ ಅಧಿಕಾರಿಗಳಿದ್ದರು.