ಇಂದು ನಾವು ಭವ್ಯ ಭಾರತದ ಸತ್ಪ್ರಜೆಗಳಾಗಿ, ಸರ್ವ ಸ್ವಾತಂತ್ರ್ಯ ರಾಷ್ಟ್ರದ ಪೌರರಾಗಿ, ಸಂವಿಧಾನದಡಿಯಲ್ಲಿ ಮೂಲಭೂತ ಹಕ್ಕುಗಳ ಹಕ್ಕುದಾರರಾಗಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನೆಮ್ಮದಿಯಿಂದ ಬಾಳುತ್ತಿರುವುದಕ್ಕೇ ಕಾರಣ ಪುರುಷರು ನೀವು…
ಅಂದು ಭಾರತಾಂಬೆಯನ್ನು ಪರಂಗಿ ಮೂತಿಯ ಬ್ರಿಟಿಷರಿಂದ ಬಂಧ ಮುಕ್ತಗೊಳಿಸಲು ಹೋರಾಡಿ ಹುತಾತ್ಮರಾದ ಮಹಾತ್ಮರು ನೀವು. ನಿಮ್ಮ ತ್ಯಾಗ ಬಲಿದಾನದ ಪ್ರತಿಫಲವೇ ನಮಗೆ ಸಿಕ್ಕಿರುವ ಸ್ವಾತಂತ್ರ್ಯ.
ಅಂದು ಭಾರತಾಂಬೆಯ ದಾಸ್ಯ ವಿಮೋಚನೆಗಾಗಿ ನಿಮ್ಮಲ್ಲಿದ್ದಂತಹ ದೇಶಪ್ರೇಮ, ಸಹನೆ, ಛಲ, ಎಲ್ಲವನ್ನೂ ಎದುರಿಸುವ ಎದೆಗಾರಿಕೆ, ಸಂಘಟಿತಾ ಮನೋಭಾವವು ಇಂದು ಸರ್ವ ಸ್ವತಂತ್ರ ಭಾರತದ ಪ್ರಜೆಗಳಾದ ನಮ್ಮಲ್ಲಿ ಕಣ್ಮರೆಯಾಗಿರುವುದು ದುರಂತವೇ ಸರಿ.
ಮಸಾಲೆ ಪದಾರ್ಥಗಳ ವ್ಯಾಪಾರಕ್ಕಾಗಿ ಬಂದವರು, ನಮ್ಮನಮ್ಮ ನಡುವೆ ಒಡೆದು ಆಳುವ ವ್ಯಾಪಾರ ನೀತಿಯನ್ನು ಅನುಸರಿಸಿ, ಸಂಪೂರ್ಣ ಭಾರತವನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಂಡ ಬ್ರಿಟಿಷರ ಪ್ರಬಲ ಪ್ರತಿರೋಧವನ್ನು, ನಮ್ಮವರೇ ಬೆನ್ನಿಗೆ ಚೂರಿ ಹಾಕಿದ ನೋವನ್ನು ಸಹಿಸಿಕೊಂಡು ದೇಶಕ್ಕಾಗಿ ಪರಂಗಿಗಳ ಫಿರಂಗಿ ಗುಂಡುಗಳಿಗೆ ಕೆಚ್ಚೆದೆಯ ಗುಂಡಿಗೆಯೊಡ್ಡಿ ನಿಂತು ಹೋರಾಡಿದವರು ನೀವು.
ಅಂದು ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟು, ಆಸ್ತಿ ಪಾಸ್ತಿಗಳನ್ನು, ಬಂಧು ಬಾಂಧವರು, ಮನೆಯವರನ್ನು ಕಳೆದುಕೊಂಡರು ಧೃತಿಗೆಡದೆ, ಹೆತ್ತ ತಾಯಿ, ಹೊತ್ತ ಮಾತೃಭೂಮಿಯ ಸೇವೆಗಾಗಿ ಬಲಿದಾನಗೈದವರು ನೀವು.
ನಿಮ್ಮ ಹೋರಾಟದ ಫಲವನ್ನು ಕೃತಜ್ಞ ಭಾವನೆಯಿಲ್ಲದೇ ಸ್ವಾತಂತ್ರ್ಯದ ಬೆಲೆಯನ್ನು ಮರೆತು ಸ್ವೇಚ್ಛೆಯಿಂದ ಅನುಭವಿಸುತ್ತಿರುವ ದೇಶ ಪ್ರೇಮ ಮರೆತ ಮತಿಹೀನರು ನಾವಾಗಿದ್ದೇವೆ.
1745 ರ ಬಂಗಾಳದ ಪ್ಲಾಸಿ ಕದನದಿಂದ ಹಿಡಿದು ೧೯೪೭ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯೂವರೆಗೂ ಲಕ್ಷಾಂತರ ದೇಶಭಕ್ತರು ಮಾಡಿದ ಪ್ರಾಣ ತ್ಯಾಗವ ಮರೆತಿದ್ದೇವೆ.
ಇಂದು ಸಿನಿಮಾ ನಟರು, ಕ್ರೀಡಾಪಟುಗಳು, ರಾಜಕಾರಣಿಗಳ ಅಂಧಾಭಿಮಾನಿಗಳಾಗಿ ಅಂದು ದೇಶಕ್ಕಾಗಿ ಹಗಲಿರುಳೆನ್ನದೆ ಹೋರಾಡಿದ ಮಂದಗಾಮಿಗಳು, ತೀವ್ರಗಾಮಿಗಳು, ಕ್ರಾಂತಿಕಾರಿಗಳ ಹೆಸರನ್ನು ಮರೆತು ಬಿಟ್ಟಿದ್ದೇವೆ.
ಇಂದು ನಮ್ಮಲ್ಲಿ ವಂದೇ ಮಾತರಂ ಗೀತೆಗೆ ಒಮ್ಮತವಿಲ್ಲ, ಜನಗಣಮನ ಗೀತೆ ಹಾಡೋಕೆ ಪುರುಸೊತ್ತಿಲ್ಲದ ಮನೋಭಾವ ಹೊಂದಿರುವ ನಾಗರೀಕರಾಗಿದ್ದೇವೆ.
ಅಂದು ನೀವು ದೇಶಪ್ರೇಮ ಸಾರಲು ಜಾತಿ ಧರ್ಮ ಭಾಷೆ ಸಂಸ್ಕೃತಿ, ಪಕ್ಷಬೇಧ ಮರೆತು ಒಂದಾಗಿದ್ದೀರಿ. ಇಂದು ನಾವು ದೇಶಕ್ಕಿಂತಲೂ ಜಾತಿ ಧರ್ಮ ಭಾಷೆ ಸಂಸ್ಕೃತಿ ಪಕ್ಷಗಳೇ ಹೆಚ್ಚಾಗಿ, ಬಿಡಿಗಾಸು, ಅಧಿಕಾರ, ಅಂತಸ್ತಿಗಾಗಿ ದೇಶವನ್ನು ಮತ್ತೊಮ್ಮೆ ಪರಕೀಯರಿಗೆ ಮಾರಲು ಹಿಂಜರಿದವರಾಗಿದ್ದೇವೆ.
ಮೋಹನ್ ರಾಯ್, ದಯಾನಂದ, ಭಾಪುಲೆ, ರಾಮಕೃಷ್ಣರ ಸಾಮಾಜಿಕ ಕಳಕಳಿ, ವಿವೇಕಾನಂದರ ವಿಚಾರಧಾರೆ, ಸಾವರ್ಕರ್, ತಿಲಕ್, ಭಗತರ ಕ್ರಾಂತಿಧಾರೆ, ಗಾಂಧಿ ಶಾಸ್ತ್ರೀಜಿಯರ ಶಾಂತಿ ಮಂತ್ರ, ಅಂಬೇಡ್ಕರರ ಕಾನೂನು ಅರಿವು, ಸುಭಾಷ್, ಪಟೇಲರ ದೇಶಾಭಿಮಾನ, ಕಸ್ತೂರ ಬಾ, ಸರೋಜಿನಿ ನಾಯ್ಡು, ಸಾವಿತ್ರಿ ಬಾಯಿ, ಚೆನ್ನಮ್ಮಾಜಿ, ಲಕ್ಷ್ಮೀಬಾಯಿ, ಅನಿಬೆಸೆಂಟ್, ಗೌರಮ್ಮರ ತ್ಯಾಗ ಜೀವನದ ಸಂದೇಶಗಳನ್ನು ನಮ್ಮಲ್ಲಿ ಮೂಡಿಸಿ, ಸದೃಢ ಭಾರತದ ರಕ್ಷಣೆಗಾಗಿ ವೀರ ಸೈನಿಕರರಾಗಿ ರೂಪಿಸಲು ನೀವು ಮತ್ತೊಮ್ಮೆ ಹುಟ್ಟಿ ಬನ್ನಿರೆಂದು ಕೈ ಮುಗಿದು ಬೇಡುವೆನು. ಇಂತಿ ನಿಮ್ಮ ಮುದ್ದಿನ ಮೊಮ್ಮಗ…
-ಶಿವಮೂರ್ತಿ.ಹೆಚ್. ದಾವಣಗೆರೆ
ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್
ಅನುಭವಮಂಟಪ ದಾವಣಗೆರೆ
9740050150