ಬೆಳಗಾವಿ: ಸಾಲ ಮನ್ನಾಕ್ಕಾಗಿ ರೈತರು ಮೇಲಿಂದ ಮೇಲೆ ಬರ ಬೀಳಲಿ ಎಂದು ಬಯಸುತ್ತಾರೆ ಎಂದು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದ ಸಹಕಾರ ಸಂಘದ ಬೆಳ್ಳಿ ಮಹೋತ್ಸವದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ರೈತರ ಬಗ್ಗೆ ಹಗುರವಾಗಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲಿಂದ ಮೇಲೆ ಬರ ಬೀಳಲಿ ಎಂದು ರೈತರು ನಿರೀಕ್ಷೆ ಮಾಡುತ್ತಾರೆ. ಬರಗಾಲ ಬಂದರೆ ಸಾಲ ಮನ್ನಾ ಆಗುತ್ತದೆ ಎಂದು ಬಯಸುತ್ತಾರೆ. ಈ ರೀತಿ ಬಯಸಬಾರದು ಎಂದಿದ್ದಾರೆ.ಕೃಷ್ಣಾ ನದಿಯಿಂದ ಪುಕ್ಕಟೆ ನೀರು ಸಿಗುತ್ತಿದೆ. ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈವರೆಗೆ ಮುಖ್ಯಮಂತ್ರಿ ಆದವರೆಲ್ಲ ಉಚಿತವಾಗಿ ಬೀಜ- ಗೊಬ್ಬರ ನೀಡಿದ್ದಾರೆ. ಸದ್ಯ ರೈತರಿಗೆ ಇರುವುದು ಬರಗಾಲ ಬರಲಿ ಎಂಬ ಆಸೆ ಮಾತ್ರ.ರೈತರು ಬಯಸಿದರೂ ಬಯಸದಿದ್ದರೂ ಮೂರು ವರ್ಷಕ್ಕೊಮ್ಮೆ ಬರಗಾಲ ಬಂದೇ ಬರುತ್ತದೆ. ಈ ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬಡ್ಡಿ ಮನ್ನಾ ಮಾಡುವ ಹೇಳಿಕೆ ನೀಡಿದ್ದಾರೆ. ರೈತರು ಇಂತಹ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದಿದ್ದಾರೆ.



