ದಾವಣಗೆರೆ: ಕರ್ತವ್ಯ ಲೋಪ ಆರೋಪದ ಹಿನ್ನಲೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿನ ದ್ವಿತೀಯ ದರ್ಜೆ ಸಹಾಯಕ ಎಚ್. ಸಂತೋಷ್ರನ್ನು ಅಮಾನತುಗೊಳಿಸಿ ಶಾಲಾ ಶಿಕ್ಷಣಇಲಾಖೆ ಜಿಲ್ಲಾ ಉಪ ನಿರ್ದೇಶಕ ಜಿ.ಕೊಟ್ರೇಶ್ ಆದೇಶಿಸಿದ್ದಾರೆ.
ನಿವೃತ್ತ ಶಿಕ್ಷಕ ಕೆ.ಆರ್.ಗೋಣಪ್ಪ ನಿವೃತ್ತಿ ವೇತನ
ಮಂಜೂರಾತಿ ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಹಿ ಹಾಕಿದ ನಂತರವೂ 4 ತಿಂಗಳ ಕಾಲ ಸಂಬಂಧಪಟ್ಟ ಮೇಲಾಧಿಕಾರಿಗಳ ಕಚೇರಿಗೆ ರವಾನಿಸದೆ ಅನಗತ್ಯವಾಗಿ ತಮ್ಮ ಬಳಿ ಇಟ್ಟುಕೊಂಡು ನಿರ್ಲಕ್ಷ್ಯ ತೋರಿದ ಆರೋಪ ಸಂತೋಷ್ ಮೇಲಿತ್ತು. ದ್ವಿತೀಯ ದರ್ಜೆ ಸಹಾಯಕ ಸಂತೋಷ್ ವಿಳಂಬ ಧೋರಣೆ ಕರ್ತವ್ಯ ನಿರ್ವಹಣೆ ಯಿಂದ ನಿವೃತ್ತಿ ಸೌಲಭ್ಯ ಸಿಕ್ಕಿಲ್ಲ ಎಂದು ನಿವೃತ್ತ ಶಿಕ್ಷಕ ಗೋಣಪ್ಪ ಶಿಕ್ಷಣ
ಇಲಾಖೆಗೆ ದೂರು ಸಲ್ಲಿಸಿದ್ದರು.
ಇದಲ್ಲದೇ ಸಹಶಿಕ್ಷಕ ಕೆ.ನರಸಿಂಹಪ್ಪ ಗೈರಾಗಿದ್ದರೂ ಅವರಿಗೆ ವೇತನ ನೀಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪವೂ ಸಂತೋಷ್ ಮೇಲಿತ್ತು. ಈ ಎರಡೂ ಪ್ರಕರಣಗಳಲ್ಲಿ ಕರ್ತವ್ಯ ಲೋಪ ಸಾಬೀತಾದ್ದರಿಂದ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಉಪನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.



