ದಾವಣಗೆರೆ: ಕುಕ್ಕರ್ ಸ್ಫೋಟಗೊಂಡ ಪರಿಣಾಮ ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ವಿನೋಭ ನಗರದಲ್ಲಿ ನಡೆದಿದೆ. ಸ್ಮಿತಾ (54) ಗಾಯಗೊಂಡ ಮಹಿಳೆಯಾಗಿದ್ದಾರೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಮಿತಾ ಅವರು ಗ್ಯಾಸ್ ಮೇಲೆ ಅನ್ನ ಮಾಡಲು ಕುಕ್ಕರ್ ಇಟ್ಟಿದ್ದಾರೆ. ಈ ವೇಳೆ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಕುಕ್ಕರ್ ಬ್ಲಾಸ್ಟ್ ಆಗಿದೆ. ಕುಕ್ಕರ್ ಬ್ಲಾಸ್ಟ್ ಆದ ಪರಿಣಾಮ ಮಹಿಳೆಗೆ. ಮುಖ, ತಲೆಭಾಗದಲ್ಲಿ ಬಹಳಷ್ಟು ಗಾಯಗಳಾಗಿವೆ. ವಿನೋಬ ನಗರದ ಒಂದನೇ ಮುಖ್ಯ ರಸ್ತೆಯ 17 ನೇ ಕ್ರಾಸ್ ನ ಮಾಚಿದೇವ ಸಮುದಾಯ ಭವನ ಸಮೀಪ ಸ್ಮಿತಾ ತಮ್ಮ ಮಗನ ಜೊತೆ ವಾಸವಿದ್ದರು.ದುರಂತ ಸಂಭವಿಸಿದ ಸಂದರ್ಭದಲ್ಲಿ ಮಗ ಮನೆಯಲ್ಲಿ ಇರಲಿಲ್ಲ.
ಕುಕ್ಕರ್ ಸ್ಫೋಟಗೊಂಡ ಭಾರಿ ಶಬ್ದಕ್ಕೆ ಅಕ್ಕಪಕ್ಕದ ನಿವಾಸಿಗಳು ಒಮ್ಮೆಲೆ ಗಾಬರಿಯಿಂದ ಮನೆಯತ್ತ ಓಡಿ ಬಂದಿದ್ದಾರೆ. ಸ್ಫೋಟದ ವಿಚಾರ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ದಳ, ಪೊಲೀಸರು ದೌಡಾಯಿಸಿದ್ದಾರೆ. ಘಟನಾ ಸ್ಥಳದಲ್ಲಿ ಆತಂಕದಿಂದ ನೂರಾರು ಜನರು ಜಮಾಯಿಸಿದ್ದರು.



