ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಶ್ರೀ ಶಿರಡಿ ಸಾಯಿಬಾಬಾ ನೂತನ ದೇವಸ್ಥಾನ ಪ್ರಾರಂಭೋತ್ಸವ ನಾಳೆಯಿಂದ (ನ.20) ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ, ಸ್ವಾತಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ
ಪಟ್ಟಣದ ಪತ್ರಿಕಾಭವನದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮತ್ತು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಗಳೂರು ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ಧರ್ಮದಲ್ಲಿ ರಾಜಕೀಯ ಬೇಡ ರಾಜಕೀಯದಲ್ಲಿ ಧರ್ಮವಿರಲಿ. ತಾಲೂಕಿನಲ್ಲಿ ಎಲ್ಲಿಯೂ ಸಾಯಿಬಾಬಾರ ಬೃಹತ್ ಮಂದಿರ ಇರಲಿಲ್ಲ. ಧರ್ಮೋ ರಕ್ಷತಿ ರಕ್ಷಿತಾಃ ಎಂದು ಪ್ರೊ.ತಿಪ್ಪೇಸ್ವಾಮಿ ಮತ್ತು ಸ್ವಾತಿ ತಿಪ್ಪೇಸ್ವಾಮಿ ಅವರು ಸೊಕ್ಕೆ ಗ್ರಾಮದಲ್ಲಿ ಮಂದಿರ ನಿರ್ಮಾಣ ಮಾಡಿ ಎಲ್ಲ ವರ್ಗದ ಜನರಿಗೆ ಬಾಬಾರ ದರ್ಶನ ಮಾಡಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಸೊಕ್ಕೆ ಗ್ರಾಮಕ್ಕೆ ರಸ್ತೆ, ಸ್ವಚ್ಛತೆ, ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಕೇವಲ ಒಂದೇ ಜಾತಿ, ಧರ್ಮಕ್ಕೆ ಸೀಮಿತವಾಗದ ಸರ್ವರೂ ಪೂಜಿಸುವ ಶಿರಡಿ ಸಾಯಿಬಾಬಾರ ಮಂದಿರ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವ ಪ್ರೊ.ತಿಪ್ಪೇಸ್ವಾಮಿ ಮತ್ತು ಮಗಳಾದ ಸ್ವಾತಿ ತಿಪ್ಪೇಸ್ವಾಮಿ ಕಾರ್ಯಕ್ಕೆ ಧನ್ಯವಾದಗಳು. ದೇವಸ್ಥಾನವನ್ನು ಹಬ್ಬದ ರೀತಿ ಉದ್ಘಾಟಿಸೋಣ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಶ್ರೀ ಶಿರಡಿ ಸಾಯಿಬಾಬಾ ಅವರ ಮೂರ್ತಿಯನ್ನು ಅಮೃತ ಶಿಲೆಯಲ್ಲಿ ಜೈಪುರ ಕಲಾವಿದ ನವೀನ್ ಜೋಶಿ ಅವರಿಂದ ಕೆತ್ತನೆ ಮಾಡಲಾಗಿದೆ ಹಾಗೂ ಶಿರಡಿಯಲ್ಲಿ ನಡೆಯುವ ಎಲ್ಲಾ ಪದ್ದತಿಯಂತೆ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುವುದು ಎಂದು ಸ್ವಾತಿ ಅವರು ತಿಳಿಸಿದ್ದಾರೆ.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ,ಕೃಷಿ ಸಚಿವ ಚೆಲುವರಾಯಸ್ವಾಮಿ, ಡಿ ಸುಧಾಕರ್, ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ(ಪಪ್ಪಿ), ಮಂಡ್ಯ ಶಾಸಕ ಪಿ ರವಿಕುಮಾರ್, ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ, ಕೂಡ್ಲಿಗಿ ಶಾಸಕ ಡಾಕ್ಟರ್ ಶ್ರೀನಿವಾಸ್, ನಿಕಟಪೂರ್ವ ಶಾಸಕರಾದ ಎಸ್ ವಿ ರಾಮಚಂದ್ರ ,ಹೆಚ್ ಪಿ ರಾಜೇಶ್, ಟಿ. ರಘುಮೂರ್ತಿ ಭಾಗವಹಿಸಲಿದ್ದು ,ಶಾಸಕ ಬಿ ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ,ಡಾ|| ಶಿವಾನುಭವ ಚರವರ್ಯ ಕರಿ ಋಷಭದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಜಿ, ಶ್ರೀ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ, ದಕ್ಷಿಣ ಕೇದಾರ ವೈರಾಗ್ಯಧಾಮ ತಪೋ ಕ್ಷೇತ್ರ ಕಣ್ವ ಗವಿಮಠ ಸಾನಿಧ್ಯ ವಹಿಸಲಿದ್ದಾರೆ.