ದಾವಣಗೆರೆ: ರಾಮಕೃಷ್ಣ ಹೆಗಡೆ ನಗರದಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದ 243 ಫಲಾನುಭವಿಗಳಿಗೆ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಹಕ್ಕುಪತ್ರ ವಿತರಿಸಿದರು.
ಮಹಾನಗರ ಪಾಲಿಕೆ ವತಿಯಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ರಾಮಕೃಷ್ಣ ಹೆಗಡೆ ನಗರದಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿ, ಹೆಗಡೆ ನಗರದಲ್ಲಿ ಸುಮಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸವಿದ್ದು, 243 ಅರ್ಹ ಫಲಾನುಭವಿಗಳನ್ನು ಗುರುತಿಸಿ ಮುಖ್ಯಮಂತ್ರಿಗಳ ನಗರನಿವೇಶನ ಯೋಜನೆಯಡಿ ಹಕ್ಕು ಪತ್ರ ನೀಡಲಾಗುತ್ತಿದೆ. ಈ ಫಲಾನುಭವಿಗಳಿಗೆ ದೊಡ್ಡಬಾತಿಯಲ್ಲಿರುವ 11.34 ಗುಂಟೆ ಜಾಗವನ್ನು ನಿವೇಶನಕ್ಕೆ ಜಾಗವನ್ನು ಗುರುತಿಸಲಾಗಿದೆ, ಮುಂದಿನ ದಿನಗಳಲ್ಲಿ ಜನರಿಗೆ ವಾಸ ಮಾಡಲು ರಸ್ತೆ, ನೀರು, ವಿದ್ಯುತ್ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯವನ್ನು ಒದಗಿಸಲಾಗುವುದು ಎಂದರು.
ಹಕ್ಕುಪತ್ರ ಪಡೆದವರು ಯಾರಿಗೂ ಮಾರಾಟ ಮಾಡಕೂಡದು ಎಂದು ಎಚ್ಚರಿಕೆ ನೀಡಿದ ಶಾಸಕರು, ಮನೆಯಡಿ ಸ್ಥಳ ಪಡೆಯುವಾಗ ಸರ್ಕಾರಿ ಆದೇಶದಲ್ಲಿ ನಮೂದಿಸಿರುವ ಅಂಶಗಳಿಗೆ ವಿರುದ್ಧವಾಗಿ ತಪ್ಪು ಮಾಹಿತಿ ನೀಡಿ ಮಂಜೂರಾತಿ ಪಡೆದಲ್ಲಿ ಅಂತಹ ಮಂಜೂರಾತಿಯನ್ನು ಕರ್ನಾಟಕ ಭೂ ಮಂಜೂರಾತಿ ಕಾಯಿದೆ ಪ್ರಕಾರ ರದ್ದುಪಡಿಸಿ ನಿವೇಶನವನ್ನು ವಾಪಸ್ ಪಡೆಯಲಾಗುವುದು.
ಈ ನಿಟ್ಟಿನಲ್ಲಿ ಫಲಾನುಭವಿಗಳು ತಮ್ಮ ಹಕ್ಕುಗಳನ್ನು ಬೇರೆಯವರಿಗೆ ಮಾರಾಟ ಮತ್ತು ಪರಭಾರೆ ಮಾಡಬಾರದು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅಧಿಕಾರಿಗಳು ಕಾನೂನಿನಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಆಯುಕ್ತೆ ರೇಣುಕಾ, ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತಿರಿದ್ದರು.



