ದಾವಣಗೆರೆ: ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲಾರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇನ್ಮುಂದೆ ಅಂಚೆ ಮೂಲಕವೂ ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸುವ ಸೌಲಭ್ಯವನ್ನು ಒದಗಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಭಾರತೀಯ ಅಂಚೆ ಇಲಾಖೆ ದಾವಣಗೆರೆ ವಿಭಾಗ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಅಂಚೆ ಕಚೇರಿಗಳಲ್ಲಿ ಪಾವತಿಸುವ ಸೌಲಭ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ನಿಯಮಾನಸಾರದಂತೆ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಸ್ಥಳದಲ್ಲೇ ಹಾಗೂ ಮನೆಗಳಿಗೆ ನೋಟಿಸ್ ಕಳುಹಿಸುವುದರ ಮೂಲಕ ದಂಡ ಸಂಗ್ರಹಿಸಲಾಗುತ್ತದೆ. ಈ ಮೊದಲು ಜಾರಿ ಮಾಡಿದ ನೋಟಿಸ್‍ಗಳನ್ನು ಜನರು ಪೊಲೀಸ್ ಠಾಣೆಗೆ ಬಂದು ದಂಡ ಪಾವತಿಸಬೇಕಾಗಿತ್ತು. ಆದರೆ, ಇನ್ಮುಂದೆ ಕರ್ನಾಟಕದ ಯಾವ ಮೂಲೆಯಲ್ಲಾದರೂ ಅಂಚೆ ಕಚೇರಿಗಳಲ್ಲಿ ದಂಡ ಪಾವತಿ ಮಾಡಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರ ಮೇಲೆ ಈಗಾಗಲೇ 1,32,000 ನೋಟಿಸ್ ಜಾರಿ ಮಾಡಲಾಗಿದ್ದು, ಕೇವಲ 11,000 ಸವಾರರಿಂದ ದಂಡ ಪಾವತಿಯಾಗಿದೆ, ಬಾಕಿ ಇರುವ ದಂಡದ ಪಾವತಿಗೆ ಅಭಿಯಾನವನ್ನು ಕೈಗೊಳ್ಳಲಾಗುತ್ತದೆ ಎಂದರು.
ಸಂಚಾರಿ ಉಲ್ಲಂಘನೆ ಎಂದರೆ ಕೇವಲ ದಂಡ ವಿಧಿಸುವುದಲ್ಲದೆ ಸರ್ಕಾರ ನೀತಿ ನಿಯಮಗಳನ್ನು ಅನುಸರಿಸಿ ಟ್ರಾಫಿಕ್ ನಿಯಂತ್ರಣ ಮಾಡುವುದು ಸಂಚಾರಿ ಪೊಲೀಸರ ಆದ್ಯ ಕರ್ತವ್ಯವಾಗಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಘಾತಗಳಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 216 ಜನ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಶೇಕಡ 82 ರಿಂದ 90 ರಷ್ಟು ಸವಾರರು ಅತಿಯಾದ ವೇಗ, ರಸ್ತೆಯಲ್ಲಿ ಸಂಚರಿಸುವಾಗ ಮೊಬೈಲ್ ಗಳನ್ನು ಬಳಸುವುದು ಹಾಗೂ ಬೇರೆಡೆ ಗಮನಹರಿಸುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತವೆ ಎಂದರು.
ಕರ್ನಾಟಕ ದಕ್ಷಿಣ ವಲಯದ ಅಂಚೆ ಸೇವೆಗಳ ಇಲಾಖೆಯ ನಿರ್ದೇಶಕ ಅಶ್ವಥ್ ನಾರಾಯಣ ಮಾತನಾಡಿ ಸಂಚಾರಿ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರು ದಂಡ ವಿಧಿಸುತ್ತಿದ್ದು, ಈ ನಿಟ್ಟಿನಲ್ಲಿ ದಂಡ ಪಾವತಿದಾರರ ಅನುಕೂಲಕ್ಕಾಗಿ ಅಂಚೆ ಕಚೇರಿಗಳಲ್ಲಿ ದಂಡ ಪಾವತಿಗೆ ಅನುಕೂಲ ಮಾಡಲಾಗಿದೆ. ಅಂಚೆ ಕಚೇರಿಗಳಲ್ಲಿ ಪಾವತಿಗೆ ಅವಕಾಶ ಕಲ್ಪಿಸಿದ್ದು, ರಾಜ್ಯದಲ್ಲಿ ದಾವಣಗೆರೆ ಎರಡನೇ ಜಿಲ್ಲೆಯಾಗಿದೆ. ಜನರು ಸಂಚಾರ ನಿಯಮ ಪಾಲಿಸಿ ಉಲ್ಲಂಘನೆ ಕಡಿಮೆ ಮಾಡಬೇಕು ಎಂದರು.
ನಮ್ಮ ದೇಶದಲ್ಲಿ ಸುಮಾರು 1,50,000 ಅಂಚೆ ಕಚೇರಿಗಳಿದ್ದು, ಪ್ರತಿ ಹಳ್ಳಿ ಹಳ್ಳಿಗೂ ಸಹ ಅಂಚೆ ಸೇವೆಯನ್ನು ವ್ಯಾಪಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ರಾಷ್ಟ್ರೀಕೃತ ಬ್ಯಾಂಕಿಗೆ ಸರಿಸಾಟಿಯಾಗಿ ಅಂಚೆ ಇಲಾಖೆ ಜನರಿಗೆ ಸೇವೆಯನ್ನು ಒದಗಿಸುತ್ತಿದೆ. ಅಂಚೆ ಇಲಾಖೆಯಲ್ಲಿ ವಿಮಾ ಸೌಲಭ್ಯ, ಬಿಲ್ ಪಾವತಿ, ಡಿಜಿಟಲ್ ಪೇಮೆಂಟ್ಸ್ ಹಾಗೂ ಔಷಧಗಳ ಪೂರೈಕೆಯ ಸೇವೆಯನ್ನು ಸಹ ಕೈಗೊಂಡಿದೆ. ಸಂಚಾರಿ ಉಲ್ಲಂಘನೆ ದಂಡವನ್ನು ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತಿದ್ದು, ಜನರ ಸಮಯ ಖರ್ಚು ವೆಚ್ಚ ಉಳಿತಾಯವಾಗುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಸಂತೋಷ, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ್, ವಿಶ್ವನಾಥ್ ಉಪಸ್ಥಿತರಿದ್ದರು.
ದಾವಣಗೆರೆ: ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಬಂದಿಲ್ಲವೇ..? ಕೂಡಲೇ ಇ-ಕೆವೈಸಿ ಅಪ್‍ಡೇಟ್ ಮಾಡಿಸಲು ಸರ್ಕಾರ ಸೂಚನೆ
ದಾವಣಗೆರೆ: ರಾಶಿ ಅಡಿಕೆ ಇಂದಿನ ಮಾರುಕಟ್ಟೆ ದರ ವಿವರ ಇಲ್ಲಿದೆ….
ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಟೀಂ ಸಕ್ರಿಯ; ಶಾಸಕರಿಗೆ 50 ಕೋಟಿ ಆಫರ್- ಶಾಸಕ ರವಿಕುಮಾರ್ ಗಣಿಗ ದಾವಣಗೆರೆಯಲ್ಲಿ ಸ್ಫೋಟಕ ಹೇಳಿಕೆ