ದಾವಣಗೆರೆ: ಸರ್ಕಾರ ಭದ್ರಾ ಡ್ಯಾಂನಿಂದ ನಾಲೆಗಳಿಗೆ ನಿರಂತರ ನೀರು ಹರಿಸುವುದಾಗಿ ಭರವಸೆ ನೀಡಿ ಹುಸಿಗೊಳಿಸಿದೆ ಎಂದು ಭಾರತೀಯ ರೈತ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕೊಳೇನಹಳ್ಳಿ ಸತೀಶ್, ಬೆಳವನೂರು ನಾಗೇಶ್ವರರಾವ್, ಶಾಮನೂರು ಲಿಂಗರಾಜ್ , ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 70ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶವಿದ್ದು, ರೈತರು ಸುಮಾರು 1.4 ಲಕ್ಷ ಎಕರೆಯಲ್ಲಿ ಭತ್ತದ ಬೆಳೆ ಬೆಳೆದಿದ್ದಾರೆ. ಸರ್ಕಾರ ನೂರು ದಿನ ನಿರಂತರ ನೀರು ಕೊಡುವುದಾಗಿ ಹೇಳಿ, ಈಗ ಮಾತು ತಪ್ಪಿದೆ. ನಿರಂತರ ನೀರು ಹರಿಸುವಂತೆ ರೈತರ ಹೋರಾಟಕ್ಕೆ ಸರ್ಕಾರ ಬೆಲೆ ಕೊಡುತ್ತಿಲ್ಲ. ಆಫ್ ಅಂಡ್ ಅನ್ ಪದ್ಧತಿ ಜಾರಿ ಮಾಡಬೇಡಿ ಎಂದರೂ, ನಿನ್ನೆ ಬೆಳಿಗ್ಗೆಯಿಂದಲೇ ಇದೇ ಪದ್ಧತಿ ಜಾರಿ ಮಾಡಿ ನೀರು ನಿಲ್ಲಿಸಲಾಗಿದೆ.
ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಅವರ ನೇತೃತ್ವದಲ್ಲಿ ರೈತರ ನಿಯೋಗ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮತ್ತು ಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ಮಾಡಿ ಭತ್ತದ ಬೆಳೆಗೆ ನಿರಂತರ ನೀರು ಹರಿಸಬೇಕು ಎಂದು ಆಗ್ರಹಿಸಿದ್ದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ನೀರು ನಿಲ್ಲಿಸದಂತೆ ರೈತರು ಎಷ್ಟೇ ಮನವಿ ಮಾಡಿದರೂ ಸರ್ಕಾರ ಮೊಂಡುತನ ತೋರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ಧೋರಣೆ ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ.ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ. ಇದರಿಂದ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಕೊರತೆ ಉಂಟಾಗಿದೆ.
ಸರ್ಕಾರದಿಂದ ರೈತರ ಪಂಪ್ ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದ ರೈತರು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಸರ್ಕಾರ ರೈತರಿಗೆ ಆತ್ಮಹತ್ಯೆಯೇ ಗ್ಯಾರಂಟಿ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರಭದಲ್ಲಿ ಕಲ್ಲುಬಂಡೆ ಪ್ರಸಾದ್, ಡಿ. ಚಂದ್ರಪ್ಪ ಕೋಲ್ಕುಂಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



