ದಾವಣಗೆರೆ: ಭದ್ರಾ ಜಲಾಶಯದ ನಾಲೆಗಳಿಗೆ ಆಫ್ ಅಂಡ್ ಆನ್ ಪದ್ಧತಿ ಜಾರಿ ಮಾಡದಂತೆ ಹಾಗೂ ನಿರಂತರ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ನೇತೃತದ ನಿಯೋಗ ಡಿಸಿಎಂ ಹಾಗೂ ಜಲ ಸಂಪನ್ಮೂಲ ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮನವಿ ಸಲ್ಲಿಸಿದರು. ಆದರೆ, ಇದೀಗ ದಾವಣಗೆರೆ ಜಿಲ್ಲಾ ನಾಯಕರು ಡಿಸಿಎಂ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಭೇಟೆಗೂ ಬೆಲೆ ಇಲ್ಲದಂತಾಗಿದ್ದು, ನಿನ್ನೆ (ಅ.17)ಸಂಜೆಯಿಂದಲೇ ಬಲದಂಡೆ ನಾಲೆಗೆ ನೀರು ಬಂದ್ ಮಾಡಲಾಗಿದೆ.
ಬಲದಂಡೆ ನಾಲೆಗೆ ಹರಿಸುತ್ತಿದ್ದ ನೀರನ್ನು ಮಂಗಳವಾರ ಸಂಜೆ 6 ಗಂಟೆಗೆ ಬಂದ್ ಮಾಡಲಾಗಿದೆ. ಅ.23 ರವರೆಗೆ 7 ದಿನ ನಾಲೆಯಲ್ಲಿ ನೀರು ಬಂದ್ ಮಾಡಿ, ಅ.24 ರಿಂದ ನ. 20 ರವರೆಗೆ ಒಟ್ಟು 25 ದಿವ ಈ ಹಿಂದೆ ಕಾಡಾ ಸಮಿತಿಯ ತೀರ್ಮಾನದಂತೆ ಆಫ್ ಅಂಡ್ ಆನ್ ಪದ್ಧತಿ ಪ್ರಕಾರವೇ ನೀರನ್ನು ಆಫ್ ಮಾಡಲಾಗಿದೆ. ಭತ್ತದ ಬೆಳೆ ಈಗ ಕಾಳು ಕಟ್ಟುವ ಹಂತದಲ್ಲಿರುವುದರಿಂದ ನೀರು ಬಂದ್ ಮಾಡದಂತೆ ರೈತರು, ಜನಪ್ರತಿನಿಧಿಗಳು ಮನವಿ ಮಾಡಿದ್ದರು. ನೀರು ಹರಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್, ಸತೀಶ್ ಕೊಳೇನಹಳ್ಳಿ, ಬಾತಿ ವೀರೇಶ್ ನೇತೃತ್ವದ ಬಿಜೆಪಿ ನಿಯೋಗವು ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಹ ನೀರು ನಿರಂತರ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದರು.
ಈ ಎಲ್ಲಾ ಒತ್ತಡಗಳ ನಡುವೆಯೂ ಭದ್ರಾ ಕಾಡಾ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸೂಚನೆ ಮೇರೆಗೆ ಈ ಹಿಂದಿನ ವೇಳಾಪಟ್ಟಿ ಪ್ರಕಾರ ಮಂಗಳವಾರ ಸಂಜೆ 6 ಗಂಟೆಯಿಂದ ಬಲದಂಡೆ ನಾಲೆಯಲ್ಲಿ ನೀರು ಬಂದ್ ಮಾಡಲಾಗಿದೆ.ಈ ತೀರ್ಮಾನದ ಬಗ್ಗೆ ರೈತರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಒಂದು ಕಡೆ ಪಂಪ್ ಸೆಟ್ ಗಳಿಗೆ 7 ತಾಸು ಕರೆಂಟ್ ಸಹ ಇಲ್ಲ, ಇನ್ನೊಂದೆಡೆ ಭದ್ರಾ ನಾಲೆ ನೀರು ನಿಲ್ಲಿಸಿರುವುದು ರೈತರಿಗೆ ಸಂಕಷ್ಟ ತಂದಿದೆ.



