ದಾವಣಗೆರೆ: ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭಾರಿ ಮತ್ತು ಮಧ್ಯಮ ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸಚಿವ ಎಂ.ಬಿ.ಪಾಟೀಲ್ ಭೇಟಿ ಮಾಡಿ ಫಲ ಪುಷ್ಪದೊಂದಿಗೆ ಭಕ್ತಿ ಸಮರ್ಪಿಸಿ ಆಶೀರ್ವಾದ ಪಡೆದರು.
ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ನೂತನ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಿದ ಸಚಿವ ಎಂ.ಬಿ.ಪಾಟೀಲರು ಜಾಗತೀಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಶೀಘ್ರದಲ್ಲಿ ಆಯೋಜಿಸಲಾಗುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ನಿರಂತರವಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಹೊಡಿಕೆದಾರರೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.
ದಾವಣಗೆರೆಯ ಕೈಗಾರಿಕಾ ಕಾರಿಡಾರ್ ಯೋಜನೆಗೆ ಫಲವತ್ತಾದ ಕೃಷಿ ಜಮೀನು ಸ್ವಾಧೀನ ಪಡಿಸಿಕೊಳ್ಳುವುದನ್ನು ವಿರೋಧಿಸಿ ದಾವಣಗೆರೆ ಸಮೀಪದ ಮೆಳ್ಳೆಕಟ್ಟೆ, ಅಣಜಿ, ಲಿಂಗಾಪುರ ಮುಂತಾದ ಗ್ರಾಮಗಳ ರೈತರು ಸದ್ಧರ್ಮ ನ್ಯಾಯ ಪೀಠಕ್ಕೆ ಮನವಿ ಸಲ್ಲಿಸಿರುವುದನ್ನು ಸಚಿವರಿಗೆ ಪ್ರಸ್ತಾಪಿಸಿದ ಶ್ರೀ ಜಗದ್ಗುರುಗಳವರು: ‘ದಾವಣಗೆರೆ ಸಮೀಪ ಕೈಗಾರಿಕಾ ಕಾರಿಡಾರ್ ಉದ್ದೇಶಕ್ಕಾಗಿ ಫಲವತ್ತಾದ 1,156 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿದೆ.
ನಮ್ಮ ರೈತರ ಜಮೀನಲ್ಲಿ ಅಡಿಕೆ, ತೆಂಗು, ಮಾವು, ಹಣ್ಣಿನ ಬೆಳೆ, ಸಾಂಬಾರ್ ಪದಾರ್ಥ ಸೇರಿದಂತೆ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. 6–7 ತಲೆಮಾರುಗಳಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ರೈತರ ಬದುಕನ್ನು ಕಸಿದುಕೊಳ್ಳುವುದು ಬೇಡ ಹಾಗಂತ ನಿಮ್ಮ ಯೋಚನೆಯು ನಿಲ್ಲುವುದು ಬೇಡ ಉಳಿಮೆಗೆ ಯೋಗ್ಯವಲ್ಲದ ಭೂಮಿಯಲ್ಲಿ ನಿಮ್ಮ ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಜಾರಿಗೊಳಿಸುವುದು ಸೂಕ್ತ ಪರಿಹಾರವಾಗಿದೆ ಎಂದು ಸಲಹೆ ನೀಡಿದರು.
ರೈತರ ಭೂಮಿಗೆ ಹೊಂದಿಕೊಂಡಿರುವ ಈ ವ್ಯಾಪ್ತಿಯಲ್ಲಿ ನವಿಲು, ಗೂಬೆ, ಮೊಲ, ನರಿ, ಕಾಡುಹಂದಿ, ಪುನುಗು ಬೆಕ್ಕು, ಕಾಡುಬೆಕ್ಕು, ಕಾಡುಕುರಿ, ಕರಡಿ, ಜಿಂಕೆ ಸೇರಿದಂತೆ ವನ್ಯಜೀವಿ ಸಂಕುಲ ಆಶ್ರಯ ಪಡೆದಿದೆ. ಇಂತಹ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ಮಾಡಿದರೆ ಜೀವವೈವಿಧ್ಯ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಕೆಲ ರೈತರಿಗೆಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ನೊಟೀಸ್ ಜಾರಿಗೊಳಿಸಲಾಗಿದೆ. ಇಲ್ಲಿ ಫಲವತ್ತಾದ ಭೂಮಿ ಇದೆ. ನೀರಾವರಿ ಸೌಲಭ್ಯ ಚನ್ನಾಗಿದ್ದು, ರೈತರು ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡಿದರೆ ಪರಿಸರ ಹಾಳಾಗಲಿದೆ. ನೀರಾವರಿ ಜಮೀನು ವಶಪಡಿಸಿಕೊಳ್ಳುವ ಬದಲು ಬರಡು ಭೂಮಿಯಲ್ಲಿ ಕೈಗಾರಿಕಾ ಕಾರಿಡಾರ್ ಮಾಡಲಿ. ರೈತರನ್ನು ಒಕ್ಕಲೆಬ್ಬಿಸುವುದು ಸಾಧುವಲ್ಲವೆಂದು ಸಚಿವರಿಗೆ ಶ್ರೀ ಜಗದ್ಗುರುಗಳವರು ಮನವರಿಕೆ ಮಾಡಿಕೊಟ್ಟರು.
ಪೂಜ್ಯರ ಸಲಹೆ ಮತ್ತು ಮಾರ್ಗದರ್ಶನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸಚಿವರು ಈ ರೈತರ ಹಿತವೇ ವೈಯಕ್ತಿಕವಾಗಿ ನನ್ನ ಆದ್ಯತೆಯಾಗಿದೆ. ರೈತರ ಒಕ್ಕಲೆಬ್ಬಿಸುವ ಯಾವುದೇ ಕ್ರಮ ಕೈಗೊಳ್ಳದೇ ತಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಯುವುದಾಗಿ ತಿಳಿಸಿದರು.