ದಾವಣಗೆರೆ: ಬಡವರಿಗೆ ಅನಗತ್ಯವಾಗಿ ಅರಣ್ಯ ಅಧಿಕಾರಿಗಳು ಹಿಂಸೆ ನೀಡುತ್ತಿದ್ದರು. ಆಗ ನಾನು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ಹೀಗಾಗಿ ಟಾರ್ಗೆಟ್ ಮಾಡಿ ನನ್ನ ಫಾರ್ಮ್ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಕಿಡಿಕಾರಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯ ಅಧಿಕಾರಿಗಳು ಅಕ್ರಮ ಸಾಗಾಟ ಆಗುವ ಶ್ರೀಗಂಧ ಸೇರಿದಂತೆ ಬೆಲೆ ಬಾಳುವ ಮರಗಳ್ಳರನ್ನು ಹಿಡಿಯಲಿ. ಅದು, ಬಿಟ್ಟು ಅಡುಗೆ ಮಾಡಲು ಕಟ್ಟಿಗೆ ತುಂಡು ತಂದವರ ಮೇಲೆ ಕೇಸ್ ಹಾಕುತ್ತಿದ್ದರು. ಇಂತಹ ಕೆಲವು ಅಧಿಕಾರಿಗಳನ್ನು ನಾನು ತರಾಟೆಗೆ ತೆಗೆದುಕೊಂಡಿದ್ದೆ. ಇದೇ ಸೇಡಿನಿಂದ ನನ್ನ ಮೇಲೆ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದರು ಎಂದರು.
2022ರ ಡಿಸೆಂಬರ್ 22 ರಂದು ಮಲ್ಲಿಕಾರ್ಜುನ ಫಾರ್ಮ್ಹೌಸ್ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪರವಾನಗಿ ಪಡೆಯದೇ ಚುಕ್ಕೆ ಜಿಂಕೆಗಳು, ಕೃಷ್ಣಮೃಗಗಳು, ಕಾಡುಹಂದಿಗಳು, ಮುಂಗುಸಿಗಳು, ನರಿಗಳನ್ನು ಸಾಕುತ್ತಿದ್ದ ಅಂಶ ಬೆಳಕಿಗೆ ಬಂದಿತ್ತು. ಅಲ್ಲದೆ, ಫಾರ್ಮ್ಹೌಸ್ನಲ್ಲಿದ್ದ ಎಲ್ಲಾ ಕಾಡು ಪ್ರಾಣಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.ಪ್ರಕರಣ ಸಂಬಂಧ ಮಲ್ಲಿಕಾರ್ಜುನ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರ ಜಾಮೀನು ಮಂಜೂರಾಗಿತ್ತು.



