ದಾವಣಗೆರೆ: ಕಾನೂನು ಗೀನೂನು ಏನೂ ಹೇಳಬೇಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಮಾಡಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮನವಿ ಮಾಡಿದರು.
ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕು ಸಾಧು ವೀರಶೈವ ಸಮಾಜದ ವತಿಯಿಂದ ಚುನಾಯಿತ ಜನಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಹೊನ್ನಾಳಿಯಲ್ಲಿ ತುಂಗಭದ್ರಾ ನದಿ ಹರಿದು ಹೋಗುತ್ತಿದೆ. ಮರಳಿಗೆ ಕೊರತೆ ಇಲ್ಲ. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಒಂದು ಚೀಲ ಮರಳು ತೆಗೆಯದಂತೆ ನಿಲ್ಲಿಎಲಸಿದ್ದಾರೆ ಇಂದಿರಾ ಆವಾಸ್ ಯೋಜನೆ ಅಡಿ ಮತ್ತು ಬಹುಗ್ರಾಮ ಯೋಜನೆ ಅಡಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮರಳು ಸಿಗದಕ್ಕೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ನಾನೂ ಒತ್ತಡಕ್ಕೆ ಸಿಲುಕಿದ್ದೇನೆ. ನಾನು ಜನರಿಗೆ ಮರಳು ನೀಡಬೇಕಿದೆ. ಈ ಕಾರಣಕ್ಕಾದರೂ ಎಸ್‍ಪಿ ಅವರನ್ನು ವರ್ಗಾವಣೆ ಮಾಡಿ ಎಂದರು.
ಕಾನೂನು ಗೀನೂನು ಏನೂ ಹೇಳಬೇಡಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ಅವರನ್ನು ವರ್ಗಾವಣೆ ಮಾಡುವಂತೆ ಜಿಲ್ಲೆಯ ಎಲ್ಲಾ ಶಾಸಕರು ಬೇಡಿಕೆ ಇಟ್ಟಿದ್ದಾರೆ ಎಂದರು. ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.



