ಡಿವಿಜಿ ಸುದ್ದಿ, ಬೆಂಗಳೂರು: ಮಾಜಿ ಮುಖ್ಯಮಂತ್ರಿ , ಕಾಂಗ್ರೆಸ್ ಪ್ರಭಾವಿ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಭೇಟಿಗೆ ಬುಲಾವ್ ಬಂದಿದ್ದು, ನಾಳೆ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಹಿನ್ನೆಲೆ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ.
ನಾಳೆ ಬೆಳಗ್ಗೆ ಬೆಂಗಳೂರಿನಿಂದ ಹೊರಡಲಿರುವ ಸಿದ್ದರಾಮಯ್ಯ ಮಂಗಳವಾರ ಕಾಂಗ್ರೆಸ್ ಹೈಕಮಾಂಡ್ ಭೇಟಿ ಆಗಲಿದ್ದಾರೆ. ಈ ಮೂಲಕ ಹೈಮಾಂಡ್ ಮುಂದೆ ಕೆಪಿಸಿಸಿ ಅಧ್ಯಕ್ಷ, ಸಿಎಲ್ ಪಿ ಮತ್ತು ವಿಪಕ್ಷ ನಾಯಕ ಸ್ಥಾನದ ಬಗ್ಗೆ ಚರ್ಚೆ ನಡೆಯಲಿದೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹೊಣೆ ಹೊತ್ತು ಸಿಎಲ್ ಪಿ ನಾಯಕ ಮತ್ತು ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರು. ಸಿದ್ದರಾಮಯ್ಯ ರಾಜೀನಾಮೆ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಸಹ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ, ವಿಪಕ್ಷ ನಾಯಕ ಮತ್ತು ಸಿಎಲ್ ಪಿ ನಾಯಕ ಆಯ್ಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಎಂಬಿಪಿ,ಡಿಕೆಶಿ ಯಾರಿಗೆ ಚಾನ್ಸ್ ..?
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ , ಹೈಕಮಾಂಡ್ ಭೇಟಿ ಮಾಡಿ ಬಂದಿದ್ದಾರೆ. ಇನ್ನು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಎಂ.ಬಿ. ಪಾಟೀಲ ಹೆಸರು ಕೂಡ ಚಾಲ್ತಿಯಲ್ಲಿದೆ. ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಬಣಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಲು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅಂತಿಮವಾಗಿ ಹೈಕಮಾಂಡ್ ಅಳೆದು-ತೂಗಿ ಯಾರಿಗೆ ಯಾವ ಸ್ಥಾನ ನೀಡುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಇದುವರೆಗೂ ಕೆಪಿಸಿಸಿ ಸ್ಥಾನಕ್ಕೆ ಇಂಥವರನ್ನೇ ನೇಮಕ ಮಾಡಿ ಎಂದು ಎಲ್ಲೂ ಹೆಸರು ಸೂಚಿಸಿಲ್ಲ.ಆದರೆ, ಡಿಕೆ ಶಿವಕುಮಾರ್ ಹೆಸರು ಚಾಲ್ತಿಯಲ್ಲಿರುವಾಗಲೇ , ಡಿಕೆ ಶಿವಕುಮಾರ್ ಮೇಲಿರುವ ಇಡಿ,ಐಟಿ ಕೇಸ್ ಗಳಿರುವುದರಿಂದ ಹೈಮಾಂಡ್ ಸ್ವಲ್ಪ ಎಚ್ವರಿಕೆ ಹೆಜ್ಜೆ ಇಡುವ ಸಾಧ್ಯತೆ ಇದೆ. ಹೀಗಾಗಿ ಹೈಮಾಂಡ್ ನಿರ್ಧಾರ ಏನೇ ಇದ್ದರೂ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇನ್ನು ವಿಪಕ್ಷ ನಾಯಕ, ಸಿಎಲ್ ಪಿ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುವಂತೆ ಹೈಕಮಾಂಡ್ ಸೂಚನೆ ನೀಡುತ್ತಾ…? ಅಥವಾ ಪ್ರತಿಪಕ್ಷ ನಾಯಕ ಸ್ಥಾನ ಮಾತ್ರ ಸಿದ್ದರಾಮಯ್ಯ ನೇಮಿಸಿ , ಸಿಎಲ್ ಪಿ ನಾಯಕ ಸ್ಥಾನ ಬೇರೆಯವರಿಗೆ ನೀಡುತ್ತಾ..? ಎಂಬುದು ಕುತೂಹಲ ಮೂಡಿಸಿದೆ..
– ಮುನಿಕೊಂಡಜ್ಜಿ



