ದಾವಣಗೆರೆ: 2023-24ನೇ ಸಾಲಿನಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ಪಡಿತರ ಕಾರ್ಡ್ ಹೊಂದಿದ ಕುಟುಂಬದಯಜಮಾನಿಗೆ ಮಾಸಿಕ 2000/- ರೂಪಾಯಿಗಳನ್ನು ಡಿ.ಬಿ.ಟಿ ಮೂಲಕ ನೇರವಾಗಿ ಅವರ ಬ್ಯಾಂಕ್ಖಾತೆಗೆ ಜಮಾ ಮಾಡಲಾಗುವುದು.
ರೇಷನ್ಕಾರ್ಡ್ನಲ್ಲಿ ನಮೂದಿಸಿರುವ ಮನೆ ಯಜಮಾನಿಯನ್ನೇ ಗೃಹಲಕ್ಷ್ಮಿಯೋಜನೆಯ ಫಲಾನುಭವಿ ಎಂದು ಪರಿಗಣಿಸಲಾಗುವುದು. ಈ ಯೋಜನೆಗಾಗಿ ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಒನ್, ಕರ್ನಾಟಕ ಓನ್ ಹಾಗೂ ಸ್ಥಳೀಯ ನಗರಾಡಳಿತ ಸಂಸ್ಥೆಗಳ ಕಚೇರಿಗಳ ಮೂಲಕ ಪ್ರಾರಂಭಿಸುವ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಸಬಹುದು. ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕವಾಗಿರುವ ಪ್ರಜಾಪ್ರತಿನಿಧಿಗಳು ಮನೆಮನೆಗೆ ತೆರಳಿ ಉಚಿತವಾಗಿ ಅರ್ಜಿಗಳ ನೋಂದಣಿಯನ್ನು ಮಾಡಿಸಿಕೊಳ್ಳುತ್ತಾರೆ. ಈ ಕೇಂದ್ರಗಳಲ್ಲದೆ ಬೇರೆ ಇನ್ನಾವುದೇ ಕೇಂದ್ರಗಳಲ್ಲಾಗಲಿ ಅಥವಾ ಮೊಬೈಲ್ ಆ್ಯಪ್ಗಳ ಮುಖಾಂತರವಾಗಲಿ ನೋಂದಣಿ ಕಾರ್ಯ ಮಾಡಲಾಗುವುದಿಲ್ಲ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ನೋಂದಣಿಗಾಗಿ ಶುಲ್ಕವನ್ನು ಪಾವತಿಸುವಂತಿಲ್ಲ.
ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ರೇಷನ್ಕಾರ್ಡ್ ಪ್ರತಿ, ಯಜಮಾನಿ ಮತ್ತು ಆಕೆಯ ಪತಿಯ ಆಧಾರಕಾರ್ಡ್ ಪ್ರತಿ, ಯಜಮಾನಿಯ ಆಧಾರ ಲಿಂಕ್ ಆಗಿರುವ ಬ್ಯಾಂಕ್ಖಾತೆ ಪುಸ್ತಕವನ್ನು ನೋಂದಣಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು. ಕಾರಣಾಂತರಗಳಿಂದ ಆಧಾರ್ ಲಿಂಕ್ ಆಗದೆ ಇರುವ ಯಜಮಾನಿಯ ಬ್ಯಾಂಕ್ಖಾತೆಗೆ ಹಣ ಸಂದಾಯವಾಗಬೇಕೆಂದು ಬಯಸಿದ್ದಲ್ಲಿ ಆ ಬ್ಯಾಂಕ್ಖಾತೆಯ ಪಾಸ್ ಪುಸ್ತಕವನ್ನು ತೆಗೆದುಕೊಂಡು ಹೋಗಿ ದಾಖಲೆ ನೀಡಿ ನೋಂದಣಿ ಮಾಡಿಸಬೇಕು.
ಗೃಹ ಲಕ್ಷ್ಮಿ ಯೋಜನೆಯ ನೋಂದಣಿಗಾಗಿ ಅರ್ಹ ಫಲಾನುಭವಿಯ ಮೊಬೈಲ್ಗೆ ಅವರು ಯಾವ ದಿನ ಅರ್ಜಿ ನೋಂದಣಿಗಾಗಿ ನೋಂದಣಿ ಕೇಂದ್ರಕ್ಕೆ ಹೋಗಬೇಕೆಂದು ಸಂದೇಶವನ್ನು ಕಳುಹಿಸಲಾಗುತ್ತದೆ. ಅದರಂತೆ ತಮಗೆ ತಿಳಿಸಿದ ದಿನಾಂಕದಂದು ಫಲಾನುಭವಿಯು ನೋಂದಣಿ ಕೇಂದ್ರಕ್ಕೆ ಹೋಗಿ ದಾಖಲೆಗಳನ್ನು ನೀಡಿ ನೋಂದಣಿ ಮಾಡಿಸುವುದು. ವೇಳಾಪಟ್ಟಿಯನ್ನು ತಿಳಿಯಲು ಫಲಾನುಭವಿಗಳು ಉಚಿತ ದೂರವಾಣಿ ಸಂಖ್ಯೆ : 1902ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದು ಅಥವಾ ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147500500ಗೆ ಎಸ್.ಎಂ.ಎಸ್ ಮಾಡಿ ನಿಗದಿಪಡಿಸಿದ ದಿನಾಂಕ ಮತ್ತು ಸಮಯವನ್ನು ತಿಳಿದುಕೊಳ್ಳಬಹುದು.
ಸುಗಮ ನೋಂದಣಿಗಾಗಿ ಈ ಕ್ರಮವನ್ನು ಅನುಸರಿಸಲಾಗುತ್ತಿದ್ದು ಫಲಾನುಭವಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಆತುರ ಮಾಡದೆ ತಾಳ್ಮೆಯಿಂದ ನೋಂದಣಿ ಮಾಡಿಸುವುದು. ಅರ್ಜಿ ನೋಂದಣಿಗಾಗಿ ಕೊನೆಯ ದಿನಾಂಕವನ್ನು ನಿಗದಿಪಡಿಸಿರುವುದಿಲ್ಲ.ಸೌಲಭ್ಯ ಪಡೆಯಲು ಅಂತ್ಯೋದಯ, ಬಿ.ಪಿ.ಎಲ್ ಮತ್ತು ಎ.ಪಿ.ಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿದ ಮಹಿಳೆ ಅರ್ಹರಾಗಿರುತ್ತಾರೆ. ಕುಟುಂಬದ ಯಜಮಾನಿ ಅಥವಾ ಆಕೆಯ ಪತಿ ಆದಾಯ ತೆರಿಗೆ ಸಲ್ಲಿಸುತ್ತಿದ್ದರೆ ಅಥವಾ ಜಿ.ಎಸ್.ಟಿ ರಿಟರ್ನ್ ಸಲ್ಲಿಸುತ್ತಿದ್ದರೆ ಅಂತಹ ಮಹಿಳೆ ಯೋಜನೆಗೆ ಅರ್ಹರಿರುವುದಿಲ್ಲ. ಈ ಯೋಜನೆಯಡಿ ಲಿಂಗತ್ವ ಅಲ್ಪ ಸಂಖ್ಯಾತರು ಸಹ ಸೌಲಭ್ಯ ಪಡೆಯಬಹುದು. ನೋಂದಣಿ ನಂತರ ಸ್ವೀಕೃತಿಯನ್ನು ಎಸ್.ಎಂ.ಎಸ್ ಮೂಲಕ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.



