ದಾವಣಗೆರೆ: ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಧ್ಯಾಹ್ನದಿಂದ ಶುರುವಾದ ಜಿಟಿಜಿಟಿ ಮಳೆ, ಇಡೀ ದಿನ ಸುರಿಯಿತು. ತುಂತುರು ಮಳೆ ಒಮ್ಮೊಮ್ಮೆ ಜೋರು ಮಳೆಯಾಗಿದ್ದು, ಜಿಲ್ಲೆಯಲ್ಲಿ ಬಿತ್ತನೆಗೆ ಹಸಿ ಮಳೆಯಾಗಿದೆ.
ದಾವಣಗೆರೆ ನಗರದಲ್ಲಿ ಸಂಜೆ 4ರ ಹೊತ್ತಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಜೋರು ಮಳೆ ಆಗಿದೆ. ಸಂಜೆ ಮಳೆ ಹೊತ್ತು ಮುಳುಗಿದರೂ ಜಿಟಿಜಿಟಿ ಬರುತ್ತಲೇ ಇತ್ತು. ಜಿಟಿಜಿಟಿ ಮಳೆಗೆ ಭೂಮಿ ತಂಪಾಗಿದ್ದು, ಮಳೆಗಾಲ ಪ್ರಾರಂಭವಾಗಿ ಒಂದು ತಿಂಗಳ ಬಳಿಕ ವಾತಾವರಣ ತಂಪಾಗಿದ್ದು ಮುಂಗಾರು ಮಳೆಯ ವಾತಾವರಣ ನಿರ್ಮಾಣವಾಗಿದೆ.
ದಾವಣಗೆರೆ, ಹರಿಹರ, ಮಲೆಬೆನ್ನೂರು, ಬರದ ನಾಡು ಜಗಳೂರು, ಅಡಿಕೆ ನಾಡು ಚನ್ನಗಿರಿ, ತ್ಯಾವಣಿಗೆ, ಸಂತೇಬೆನ್ನೂರು, ಮಲೆನಾಡು ಸೆರಗಿನ ಹೊನ್ನಾಳಿ, ನ್ಯಾಮತಿ ತಾಲ್ಲೂಕಿನ ಭಾಗಗಳಲ್ಲಿ ಮಳೆಯಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಕೆಲವೆಡೆ ಮೆಕ್ಕೆಜೋಳ ಬಿತ್ತನೆಯಾಗಿದ್ದರೆ, ಕೆಲವು ಕಡೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಹದ ಮಳೆಯಾಗಿದ್ದರಿಂದ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಲಿದೆ.
ರಾಜ್ಯದಲ್ಲಿ ನಾಲ್ಲೈದು ದಿನ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.ಇಂದು (ಜುಲೈ 3) ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಜುಲೈ 4ರಂದು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಹಾಗೂ ಬೆಳಗಾವಿ, ಧಾರವಾಡ, ಹಾವೇರಿ, ತುಮಕೂರು, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಜುಲೈ 5 ರಂದು ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಹಾಗೂ ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗೆ ಯೆಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಲ್ಲಿ ರಾತ್ರಿ ವೇಳೆ ಸಾಧಾರಣ ಮಳೆಯಾಗಲಿದೆ ಎಂದು ಸೂಚನೆ ನೀಡಿದೆ.



