ಬೆಂಗಳೂರು: ಜೂನ್ ಆರಂಭದಲ್ಲಿ ಶುರುವಾಗಬೇಕಿದ್ದ ಮುಂಗಾರು ಮಳೆ, ಸೈಕ್ಲೋನ್ ಪರಿಣಾಮದಿಂದ ದುರ್ಬಲಗೊಂಡಿತ್ತು. ಇದೀಗ ಜೂನ್ 20ರಿಂದ ನಿಧಾನವಾಗಿ ಮುಂಗಾರು ಚುರುಕು ಪಡೆದ ಪರಿಣಾಮ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಜೂನ್ 25ರಿಂದ ಮುಂಗಾರು ಮಳೆ ಇನ್ನಷ್ಟು ಚುರುಕು ಪಡೆದುಕೊಳ್ಳಲಿದ್ದು, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಿತ್ರದುರ್ಗ, ಹಾಸನ, ಮಂಡ್ಯ, ತುಮಕೂರಿನಲ್ಲಿಯೂ ಜೂ 22ರಂದು ಯೆಲ್ಲೋ ಅಲರ್ಟ್ ಇದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೂ 23ರಿಂದ ಮಳೆ ಸುರಿಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಜೂ 25ರಿಂದ ಮುಂದಿನ ಎರಡು ದಿನ ಭಾರಿ ಮಳೆ ಬೀಳುವ ಸಾಧ್ಯತೆ ಎಂದಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಮುಂಗಾರು ಮಾರುತಗಳು ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಪ್ರಬಲಗೊಂಡ ಹಿನ್ನೆಲೆಯಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ಮುಂಗಾರು ಇನ್ನಷ್ಟು ಮುನ್ನಡೆಯಲು ಪೂರಕ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಉತ್ತರ ಒಳನಾಡಿನಲ್ಲೂ ಮಾರುತಗಳು ಪ್ರವೇಶಿಸಿದ್ದು, ಜೂ 25ರಿಂದ ಈ ಭಾಗದಲ್ಲಿ ಜೋರಾಗಿ ಮಳೆಯಾಗಲಿದೆ.



