ದಾವಣಗೆರೆ: ಸಾಮಾನ್ಯವಾಗಿ ರಸ್ತೆಯಲ್ಲಿ ಹೋಗುವಾಗ ಬಂಗಾರ ಸರ ಸಿಕ್ಕಿರೆ, ಯಾರಿಗೂ ಹೇಳದಂತೆ ತಮ್ಮಲ್ಲಿಯೇ ಇಟ್ಟುಕೊಳ್ಳುವ ಕಾಲವಿದು. ಇಂತಹ ಕಾಲದಲ್ಲಿ ಶಿಕ್ಷಕ ದಂಪತಿಗಳು ರಸ್ತೆಯಲ್ಲಿ ಸಿಕ್ಕ 3 ಲಕ್ಷ ಮೌಲ್ಯದ ಬಂಗಾರದ ಸರವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಪೊಲೀಸರು ಆ ಸರದ ಮೂಲ ಮಾಲೀಕರಿಗೆ ತಲುಪಿಸಿದ್ದು,ಶಿಕ್ಷಕ ದಂಪತಿಗಳ ಈ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯಲ್ಲಿ ಈ ಘಟನೆ ನಡೆದಿದೆ ಹಿರೇಕೊಗಲೂರಿನ ಪೂರ್ಣಿಮಾ, ಶ್ರೀನಿವಾಸ ರಸ್ತೆಯಲ್ಲಿ ಸಿಕ್ಕ 3 ಲಕ್ಷ ಮೌಲ್ಯದ ಬಂಗಾರದ ಮಾಂಗಲ್ಯ ಸರವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಶಿಕ್ಷಕ ದಂಪತಿಗಳಾಗಿದ್ದಾರೆ. ಶಾಲೆ ಮುಗಿಸಿ ಸಂತೆಬೆನ್ನೂರಿನಲ್ಲಿ ದಿನಸಿ ತೆಗೆದುಕೊಳ್ಳಲು ಹೋದಾಗ ರಸ್ತೆಯಲ್ಲಿ ಮಾಂಗಲ್ಯ ಸರ ಸಿಕ್ಕಿದೆ.ಈ ಮಾಂಗಲ್ಯ ಸರವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಸಂತೆಬೆನ್ನೂರಿನ ರಸ್ತೆಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ ತಕ್ಷಣ ಅದರ ವಾರಸುದಾರರು ಯಾರೆಂದು ಪೊಲೀಸರು ಪತ್ತೆ ಹಚ್ಚಿ ಒಪ್ಪಿಸಲಾಗಿದೆ. ಇನ್ನು ಈ ಚಿನ್ನದ ಸರ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಪ್ರಾಧ್ಯಾಪಕ ಕುಮಾರ್ ಅವರ ಪತ್ನಿ ಲತಾ ಎಂಬುವರಿಗೆ ಸೇರಿದ್ದಾಗಿದೆ. ಲತಾ ಅವರು ಇಂದು ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ಕಳೆದುಕೊಂಡ ಸರದ ಬಗ್ಗೆ ಲತಾ ಅವರು ಸಂತೆಬೆನ್ನೂರು ಪೊಲೀಸ್ ಠಾಣೆಗೆ ತೆರಳಿ ಬೆಳಗ್ಗೆಯೇ ಮಾಹಿತಿ ನೀಡಿದ್ದರು.



