ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣಕ್ಕೆ (ಶಕ್ತಿ ಯೋಜನೆ) ಸಿಎಂ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಸಿಎಸ್ ವಂದಿತಾ ಶರ್ಮಾ ಅವರಿಗೆ ಮೊದಲ ಶೂನ್ಯ ಟಿಕೆಟ್ ನೀಡಿ ಉಚಿತ ಪ್ರಯಾಣಕ್ಕೆ ಚಾಲನೆಯನ್ನು ಸಿಎಂ ನೀಡಿದರು. ವೇದಿಕೆಯಲ್ಲಿ ಐವರು ಮಹಿಳೆಯರಿಗೆ ಸಾಂಕೇತಿಕವಾಗಿ ಮಾದರಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯ್ತು.
ನಂತರ ಮಾತನಾಡಿದ ಸಿಎಂ, ಮಹಿಳಾ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚು ಭಾಗಿಯಾಗಬೇಕು. 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳಿಂದ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದರು.
‘ಶಕ್ತಿ’ ಯೋಜನೆ ಹೆಸರಿನ ಹಿಂದಿನ ಸೀಕ್ರೆಟ್ ರಿವೀಲ್ ಮಾಡಿದ ಸಿಎಂ ತಮ್ಮ ಭಾಷಣದ ವೇಳೆ ‘ಶಕ್ತಿ’ ಎಂದು ಹೆಸರು ಇಟ್ಟಿದ್ದು ಯಾಕೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಿದರು. ಹೆಣ್ಣುಮಕ್ಕಳಿಗೆ ಶಕ್ತಿ ತುಂಬೋಕೆ ಅಂತ ಈ ಹೆಸರು ಇಟ್ಟೆವು. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮತೋಲನ ಕಡಿಮೆ ಮಾಡಬಹುದು. 5 ಗ್ಯಾರಂಟಿ ಪೈಕಿ 4 ಗ್ಯಾರಂಟಿ ಮಹಿಳೆಯರಿಗೆ ಸೀಮಿತ, ಅವರಿಗೆ ಸಂಬಂಧಿಸಿದೆ. ಕೆಲವರು ಇದಕ್ಕೆ ಗೇಲಿ ಮಾಡಿ, ಕುಹಕ ಮಾತು ಆಡ್ತಾರೆ.ಇದಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲ. ಗೇಲಿ ಮಾಡೋರಿಗೆ, ಕುಹಕ ಮಾಡೋರಿಗೆ ಸೊಪ್ಪು ಹಾಕಲ್ಲ ಎಂದು ಹೇಳಿದರು.
ಗ್ಯಾರಂಟಿಗಳ ಟೀಕೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಜುಲೈ 1ರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ. ಶಕ್ತಿ ಯೋಜನೆಯನ್ನು ಅತ್ಯಂತ ಸಂತೋಷ ದಿಂದ ಉದ್ಘಾಟನೆ ಮಾಡಿದ್ದೇನೆ. ನಾನು ಕೂಡ ಬಹಳ ಸಂತೋಷವಾಗಿದ್ದೇನೆ ಎಂದರು.
ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದ್ರೆ ಪುರುಷರಷ್ಟೆ ಮಹಿಳೆಯರಿಗೆ ಅವಕಾಶ ಸಿಗಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಲ್ಲದೆ ಹೋದ್ರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಯಾವುದೇ ಅಭಿವೃದ್ಧಿ ಹೊಂದಿದ ದೇಶದಲ್ಲಿ ಮಹಿಳೆಯರೇ ಹೆಚ್ಚು ಅವಕಾಶ ಪಡೆಯುತ್ತಿದ್ದಾರೆ.ಅಮೆರಿಕಾ, ಚೀನ, ಆಸ್ಟ್ರೇಲಿಯ, ಇಂಡೋನೇಷ್ಯಾ, ಬಾಂಗ್ಲಾದೇಶದಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಭಾರತದಲ್ಲಿ 24% ಮಾತ್ರ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದಾರೆ. 2014 ರಲ್ಲಿ 30% ರಿಂದ 24% ಗೆ ಇಳಿದಿದೆ. ಇದನ್ನ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು.
ಮಹಿಳೆಯ ಬಗ್ಗೆ ಮೊಸಳೆ ಕಣ್ಣೀರು ಹಾಕೋರ ಕಾಲದಲ್ಲಿ 30% ನಿಂದ 24% ಮಹಿಳೆ ಪಾಲ್ಗೊಳ್ಳುವಿಕೆ ಆಗಿದೆ. ಮನುವಾದಿಗಳು ಬಯಸೋದೆ ಅದು. ಹೆಣ್ಣು ಮಕ್ಕಳು ಹೊರಗೆ ಬರಬಾರದು ಅನ್ನೋದು ಮನುವಾದಿಗಳ ಆಸೆ. ಯಾವ ದೇಶದಲ್ಲಿ ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದರೆ ದೇಶ ಅಭಿವೃದ್ಧಿ ಆಗುತ್ತೆ ಎಂದರು.
ಡಿಸಿಎಂ ಡಿಕೆಶಿವಕುಮಾರ್ (DK Shivakumar), ಸಚಿವ ಮಧು ಬಂಗಾರಪ್ಪ, ಸಚಿವ ಕೆಜೆ ಜಾರ್ಜ್, ಎಂಎಲ್ಸಿ ಹರಿಪ್ರಸಾದ್, ನಾಗರಾಜ್ ಯಾದವ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ್ ರಾಜು, ಅಧಿಕಾರಿಗಳಾದ ರಾಖೇಶ್ ಸಿಂಗ್, ರಜನೀಶ್ ಗೊಯಲ್, ಬಿಎಂಟಿಸಿ ಎಂಡಿ ಸತ್ಯವತಿ, ಅನ್ಬು ಕುಮಾರ್ ಮೊದಲಾದ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇಂದು (ಭಾನುವಾರ) ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದೆ. 18,609 ಬಸ್ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ.