ದಾವಣಗೆರೆ; ಇಂದು ಬೆಳ್ಳಂಬೆಳಗ್ಗೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ನಿನ್ನೆ (ಮೇ 29) ಮಧ್ಯಾಹ್ನ ಸಹ ಕೆಲವು ಕಡೆ ಭಾರೀ ಮಳೆಯಾಗಿದೆ. ಬಿಸಿಲಿನ ತಾಪಕ್ಕೆ ಕಾದಿದ್ದ ಭೂಮಿಗೆ ವರಣ ತಂಪೆರೆದಂತಾಗಿದೆ. ಮುಂಗಾರು ಮಳೆ ರಾಜ್ಯ ಪ್ರವೇಶಕ್ಕೆ ಇನ್ನೂ ಒಂದು ವಾರ ಸಮಯವಿದ್ದು, ಈಗಾಗಲೇ ಭೂಮಿ ಹದ ಮಾಡಿಕೊಂಡಿದ್ದ ರೈತರು ಈ ಮಳೆಗೆ ಈಗಾಗಲೇ ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ.
ಹರಿಹರ, ದಾವಣಗೆರೆ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ, ಜಗಳೂರು ತಾಲ್ಲೂಕಿನ ಕೆಲವು ಕಡೆ ಉತ್ತಮ ಮಳೆಯಾಗಿದೆ. ಸೋಮವಾರ ಮಧ್ಯಾಹ್ನ ಬಿರುಗಾಳಿ, ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗಿದೆ. ಇಂದು (ಮಂಗಳವಾರ) ಸಹ ಬೆಳ್ಳಂಬೆಳಗ್ಗೆ ಜೋರು ಮಳೆಯಾಗಿದೆ.
ಹರಿಹರ ತಾಲೂಕಿನ ಕೊಂಡಜ್ಜಿ, ಕೆಂಚನಹಳ್ಳಿ , ಬುಳ್ಳಾಪುರ, ದಾವಣಗೆರೆ ತಾಲೂಕಿನ ಕಡ್ಲೆಬಾಳು, ಆವರಗೊಳ್ಳ, ಕಕ್ಕರಗೊಳ್ಳದಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆಯಾಗಿದೆ. ನಿನ್ನೆ ಮಾಯಕೊಂಡ, ಕೊಡಗನೂರು, ಬೊಮ್ಮೇನಹಳ್ಳಿ, ಕಳವೂರು, ಬೊಮ್ಮೇನಹಳ್ಳಿ ತಾಂಡಾ, ಕರು, ಅತ್ತಿಗೆ ಭಾಗದಲ್ಲಿ ಸೋಮವಾರ ಬೀಸಿದಗಾಳಿ, ಭಾರೀ ಮಳೆಯಾಗಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬೃಹತ್ ಮರಗಳು ಧರೆಗೆ ಉರುಳಿವೆ. ಅನೇಕ ಕಡೆ ವಿದ್ಯುತ್ ಕಂಬಗಳು ಉರುಳಿದರೆ, ಮತ್ತೆ ಕೆಲವುವಿದ್ಯುತ್ ಕ೦ಬಗಳು ಗಾಳಿ ಹೊಡೆತಕ್ಕೆ ತುಂಡಾಗಿವೆ. ಕೊಡಗನೂರು ಗ್ರಾಮದ ಬಳಿ, ಬೊಮ್ಮೇನಹಳ್ಳಿ ತಾಂಡಾದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ.
ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗದ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮನೆ ಮುಂದೆ, ರಸ್ತೆ ಬದಿ ನೆರಳಿನಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು,ಗಾಜುಗಳು ಮಳೆ, ಗಾಳಿ ಹೊಡೆತದಿಂದಾಗಿ ಜಖ೦ಗೊ೦ಡಿವೆ. ಮಾಯಕೊಂಡ, ಅತ್ತಿಗೆರೆ,ಕಟ್ಟೂರು, ಕೊಡಗನೂರುಸೇರಿ ಅನೇಕ ಭಾಗದಲ್ಲಿ ಅಡಿಕೆ ಮರಗಳು, ಬಾಳೆ ಗಿಡಗಳು ಮಳೆ, ಗಾಳಿ ಹೊಡೆತದಿ೦ದ ಉರುಳಿ ಬಿದ್ದಿದ್ದು, ರೈತರು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.



