ದಾವಣಗೆರೆ: ಖೇಲೋ ಇಂಡಿಯಾ ಯೋಜನೆಯಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು 7 ಕೋಟಿ ಅನುದಾನನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲು ಕೇಂದ್ರ ಸರ್ಕಾರದ ಯುವಜನ ಸೇವೆ ಮತ್ತು ಸಬಲೀಕರಣ ಸಚಿವಾಲಯಕ್ಕೆ ಕ್ರೀಡಾ ಇಲಾಖೆಯಿಂದ ಪ್ರಸ್ತಾವನೆ ಸಿದ್ಧಪಡಿಸಿ, ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ. ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಅಳವಡಿಕೆಯಿಂದ ಕ್ರೀಡಾಪಟುಗಳಿಗಾಗುವ ಅನುಕೂಲವನ್ನು ಕೇಂದ್ರಯುವಜನ ಸೇವಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಗೆ ಸ್ವತಃ ತಾವೇ ಖುದ್ದಾಗಿ ವಿವರಿಸಿ, ಅನುದಾನ ಬಿಡುಗಡೆಗೆ ಮನವಿ ಮಾಡಿದ್ದೆವು. ಇತ್ತೀಚೆಗೆ ಅಧಿವೇಶನದ ವೇಳೆ ಮತ್ತೆ ಸಚಿವ ಠಾಕೂರ್‌ರನ್ನು ಭೇಟಿಯಾಗಿ,ಮನವಿ ಮಾಡಿದ್ದರಿಂದ ಬೇಲೋ ಇಂಡಿಯಾದಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು 7 ಕೋಟಿ ಬಿಡುಗಡೆ ಮಾಡಿ, ಆಡಳಿತಾತ್ಮಕ ಅನುಮೋದನೆ ನೀಡಿರುವುದಾಗಿ ಹೇಳಿದ್ದಾರೆ.
ಅನುದಾನ ಬಿಡುಗಡೆ ಆದೇಶವನ್ನು ರಾಜ್ಯದ ಯುವಜನ ಸೇವೆ ಮತ್ತು ಕ್ರೀಡಾಇಲಾಖೆ ಆಯುಕ್ತರಿಗೆ ಕಳಿಸಿ, ಆದಷ್ಟು ತ್ವರಿತವಾಗಿ ಕಾಮಗಾರಿ ಅನುಷ್ಠಾನ ಕೈಗೊಳ್ಳಲು ನಿರ್ದೇಶನನೀಡಿದ್ದಾರೆ. ಅನುದಾನ ಬಿಡುಗಡೆ ಮಾಡಿದ ಸಚಿವ ಠಾಕೂರ್‌ರನ್ನು ಅಭಿನಂದಿಸುವುದಾಗಿ ಸಂಸದ ಸಿದ್ದೇಶ್ವರ ತಿಳಿಸಿದ್ದಾರೆ.



