ಬೆಂಗಳೂರು: 7ನೇ ವೇತನ ಆಯೋಗ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮತ್ತೆ ನಿರಾಸೆ ನೀಡಿದ್ದು, ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ 7ನೇ ವೇತನ ಆಯೋಗ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೇಸರ ವ್ಯಕ್ತಪಡಿಸಿದ್ದು, ಮತ್ತೊಮ್ಮ ಮನವಿ ಮಾಡುತ್ತೇವೆ. ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ. ರಾಜ್ಯ ಸರ್ಕಾರದ ಈ ಸಲದ ಬಜೆಟ್ನಿಂದ ಸರ್ಕಾರಿ ನೌಕರರಿಗೆ ಭ್ರಮನಿರಸನವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತೀವ್ರ ಅಸಮಾಧಾನ ವ್ಯಕ್ತಪಡಿದ್ದಾರೆ.
ಈ ಬಜೆಟ್ನಲ್ಲಿ 7ನೇ ವೇತನ ಆಯೋಗ ಘೋಷಣೆ ಮಾಡುವುದಾಗಿ ಸಿಎಂ ಹೇಳಿದ್ದರೂ ಅದನ್ನು ಘೋಷಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಬೇಡಿಕೆ ಕುರಿತು ಮುಖ್ಯಮಂತ್ರಿಯವರಿಗೆ ಈಗಲೂ ಇನ್ನೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದು, ಬಜೆಟ್ ಉತ್ತರ ನೀಡುವ ವೇಳೆಯಲ್ಲಾದರೂ ಅವರು ಅದನ್ನು ಘೋಷಣೆ ಮಾಡಬಹುದು. ನಾವು ಎಲ್ಲಾ ಪ್ರಮುಖರ ಜೊತೆ ಚರ್ಚೆ ಮಾಡಿ ಮುಂದೆ ಏನು ತೀರ್ಮಾನ ಮಾಡಬೇಕು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ. ಇಂಥ ಸಂದರ್ಭದಲ್ಲಿ ಹೋರಾಟ ಮಾಡುವ ಅವಕಾಶ ಇದೆ. ಆದರೆ ಈಗ ನಾವು ಆ ಮಟ್ಟಕ್ಕೆ ಹೋಗುವುದಿಲ್ಲ. ಐದು ಸಾವಿರ ಮಂದಿ ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯ ಪಡೆದು ಮುಂದಿನ ನಿಲುವು ತಳೆಯುತ್ತೇವೆ. ಹೋರಾಟದ ಅವಕಾಶವೂ ನಮ್ಮ ಮುಂದಿದೆ. ಸರ್ಕಾರದ ಮುಂದಿನ ತೀರ್ಮಾನದ ಬಳಿಕ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂಬುದಾಗಿ ಅವರು ಹೇಳಿದ್ದಾರೆ.



