Connect with us

Dvgsuddi Kannada | online news portal | Kannada news online

ನಾಳೆ ತರಳಬಾಳು ಶ್ರೀಗಳಿಂದ ಕಾಶಿ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಗಣಕಾಷ್ಟಾಧ್ಯಾಯಿ ಕುರಿತು ವಿಶೇಷ ಉಪನ್ಯಾಸ

ಪ್ರಮುಖ ಸುದ್ದಿ

ನಾಳೆ ತರಳಬಾಳು ಶ್ರೀಗಳಿಂದ ಕಾಶಿ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಗಣಕಾಷ್ಟಾಧ್ಯಾಯಿ ಕುರಿತು ವಿಶೇಷ ಉಪನ್ಯಾಸ

ಸಿರಿಗೆರೆ: ದೇಶದ ಸುಪ್ರಸಿದ್ಧ ಐತಿಹಾಸಿಕ ವಿಶ್ವ ವಿದ್ಯಾಲಯವಾದ ಕಾಶಿಯ ಬನರಾಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಫೆಬ್ರವರಿ ನಾಳೆ (17) ವಿಶೇಷ ಉಪನ್ಯಾಸ ನೀಡುವಂತೆ ಆಮಂತ್ರಿಸಲಾಗಿದೆ.

ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಭಾರತ ಅಧ್ಯಯನ ಕೇಂದ್ರ ಸಂಸ್ಕೃತ ಮತ್ತು ಗಣಕ ಯಂತ್ರ ವಿಭಾಗದ ಸಭಾಂಗಣದಲ್ಲಿ ಶ್ರೀಗಳು ಬೆಳಗ್ಗೆ 11 ಗಂಟೆ ಹಾಗೂ ಮಧ್ಯಾಹ್ನ 3 ಗಂಟೆಗೆ ಎರಡು ಉಪನ್ಯಾಸ ನೀಡಲಿದ್ದಾರೆ.ಸಂಸ್ಕೃತ ಮಹಾಕವಿ ಪಾಣಿನಿ ಮಹರ್ಷಿಯ ಅಷ್ಠಾದ್ಯಾಯಿ ಕುರಿತು ಶ್ರೀ ಜಗದ್ಗುರುಗಳವರು ಉಪನ್ಯಾಸ ನೀಡಲಿದ್ದಾರೆ. ಪಾಣಿನಿ ಮಹರ್ಷಿಯೇ ಜಗತ್ತಿನ ಮೊದಲ ಕಂಪ್ಯೂಟರ್ ತಂತ್ರಜ್ಞಾನಿ ಎಂದು ಜಗದ್ಗುರುಗಳವರು ಬಲವಾಗಿ ಪ್ರತಿಪಾದಿಸಿದ್ದಾರೆ.ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಶಿಯ ವಿದ್ವತ್ ಪರಿಷತ್ತಿನ ಪದ್ಮಭೂಷಣ ಆಚಾರ್ಯ ವಸಿಷ್ಠ ತ್ರಿಪಾಠಿ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕಾಶಿ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಪ್ರೊ.ಜಯಶಂಕರಲಾಲ್ ತ್ರಿಪಾಠಿ ಭಾಗವಹಿಸುವರು.

ತರಳಬಾಳು ಶ್ರೀಗಳು ಬೃಹನ್ಮಠದ ಪೀಠಾಧ್ಯಕ್ಷರಾಗುವ ಪೂರ್ವದಲ್ಲಿ ಕಾಶಿಯ ಹಿಂದೂ ಬನರಾಸ್ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ನಂತರ ಅದೇ ವಿವಿಯಲ್ಲಿ ತಮ್ಮ ಡಾಕ್ಟರೇಟ್‌ ಪದವಿಯನ್ನೂ ಪಡೆದಿದ್ದರು. ಮೈಸೂರು ಯುವರಾಜ ಕಾಲೇಜನಲ್ಲಿ ಪದವಿ ಪೂರೈಸಿದ್ದ ಶ್ರೀ ಜಗದ್ಗುರುಗಳವರುನಂತರ ಹಿರಿಯ ಜಗದ್ಗುರುಗಳವರು.ಅಪೇಕ್ಷೆಯಂತೆ ಕಾಶಿಯಲ್ಲಿ ಉನ್ನತ ವ್ಯಾಸಂಗಕ್ಕೆ ಕಾಶಿಗೆ ತೆರಳಿದ್ದರು.

ಪರಂಪರೆಯ ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿರುವವರು ಕರ್ನಾಟಕ ರಾಜ್ಯದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಭಾರತದ ಯಾವುದೇ ಸ್ವಯಂಸೇವಾ ಅಥವಾ ಧಾರ್ಮಿಕ ಸಂಸ್ಥೆಗಳು ಕಂಪ್ಯೂಟರ್ ಕುರಿತು ಆಲೋಚಿಸುವ ಮುನ್ನವೇ ತಮ್ಮ ಬೃಹನ್ಮಠದ ಕಾರ್ಯಚಟುವಟಿಕೆಗಳಿಗೆ 1984ರಲ್ಲಿಯೇ ಕಂಪ್ಯೂಟರನ್ನು ಬಳಸುವ ಮೂಲಕ ದೇಶದ ಗಮನ ಸೆಳೆದಿದ್ದರು.

ದೇಶದ ಯಾವುದೇ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕರು ಲ್ಯಾಪ್‌ ಟಾಪ್‌ ಕಂಪ್ಯೂಟರ್‌ ಗಳ ಬಳಕೆಯನ್ನು ಆರಂಭಿಸುವ ಮುನ್ನವೇ, ಅಂದರೆ 1994ರಲ್ಲಿಯೇ ಶ್ರೀ ಜಗದ್ಗುರುಗಳವರು ಸ್ವಾಮೀಜಿಗಳು ಲ್ಯಾಪ್‌ಟ್ಯಾಪ್‌ನ್ನು ಖರೀದಿಸಿ ಬಳಸಿದ್ದಾರೆ!.

ಆಧುನಿಕ ಕಂಪ್ಯೂಟರ್ ತಂತ್ರಜ್ಞಾನದ ಉಪಯುಕ್ತತೆಯನ್ನು ಅರಿತು ತಮ್ಮ ಕಾರ್ಯಕ್ಷೇತ್ರದಲ್ಲಿ ಅದನ್ನು ದುಡಿಸಿಕೊಳ್ಳುವುದನ್ನು ಬಹಳ ಹಿಂದೆಯೇ ಆರಂಭಿಸಿದ ಕೀರ್ತಿಗೆ ಶ್ರೀ ಜಗದ್ಗುರುಗಳವರು ಪಾತ್ರರಾಗಿದ್ದಾರೆ. ಇಂದಿಗೂ ದೇಶ-ವಿದೇಶ ಭೇಟಿಯ ವೇಳೆ ವಿಮಾನ ಪ್ರಯಾಣದಲ್ಲಿ ಮತ್ತು ಸಿರಿಗೆರೆ-ಬೆಂಗಳೂರು ನಡುವೆ ಪ್ರಯಾಣ ಮಾಡುವಾಗ ಸ್ವಾಮೀಜಿಯವರು ಸಮಯ ವ್ಯರ್ಥಗೊಳಿಸದೆ ತಮ್ಮ ಲ್ಯಾಪ್‌ಟಾಪ್‌ ಬಳಸಿ ಕಾರ್ಯನಿರ್ವಹಿಸುತ್ತಾರೆ.

ಕರ್ನಾಟಕ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಿಸಿರುವ ಬೃಹನ್ಮಠದ ಶಿಕ್ಷಣ ಸಂಸ್ಥೆಗಳ ಸಮಸ್ತ ಲೆಕ್ಕಪತ್ರಗಳನ್ನು ನಿರ್ವಹಿಸಲು ತಮ್ಮದೇ ಆದ ಸ್ವಂತ ತಂತ್ರಾಂಶವಾದ ‘ಶಿವ’ ಎಂಬ ಹೆಸರಿನ ತಂತ್ರಾಂಶವನ್ನು 1984ರಲ್ಲಿಯೇ ಸಿದ್ಧಪಡಿಸಿಬಳಸುವ ಮೂಲಕ (ಸಾಫ್ಟ್‌ವೇರ್) ಆಧುನಿಕ ತಂತ್ರಜ್ಞಾನದ ಬಳಕೆ ಆರಂಭಿಸಿದರು.

ಶ್ರೀ ಜಗದ್ಗುರುಗಳವರು ವೈಜ್ಞಾನಿಕ ತಳಹದಿಯುಳ್ಳ ಪಾಣಿನಿ ಮಹರ್ಷಿಯೇ ಸಂಸ್ಕೃತ ವ್ಯಾಕರಣ ಕುರಿತ ಪಾಣಿನಿಯ ಸೂತ್ರಗಳನ್ನು ಆಧರಿಸಿದ ಅಷ್ಠಾದ್ಯಾಯಿ ಗ್ರಂಥವನ್ನು ‘ಗಣಕಾಷ್ಟಾಧ್ಯಾಯಿ’ ಎಂಬ ತಂತ್ರಾಂಶವನ್ನು ಸಿದ್ಧಪಡಿಸಿ, ಸಂಸ್ಕೃತ ಅಧ್ಯಯನ ನಿರತ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಆಧುನಿಕ ತಂತ್ರಜ್ಞಾನದ ಮೂಲಕ ತಮ್ಮ ಅಧ್ಯಯನವನ್ನು ಸುಲಭಗೊಳಿಸಿ ವಿಸ್ಮಯ ಮೂಡಿಸಿದ್ದಾರೆ.

ಭಾರತೀಯ ಪರಂಪರೆಯಿಂದ ಬಂದ ಸಾಂಪ್ರದಾಯಿಕ ಜ್ಞಾನ ಮತ್ತು ಪಾಶ್ಚಿಮಾತ್ಯ ಆಧುನಿಕ ತಂತ್ರಜ್ಞಾನ ಎರಡನ್ನೂ ವಿಶಿಷ್ಟ ರೀತಿಯಲ್ಲಿ ಬೆರೆಸಿ ಹದಗೊಳಿಸಿಕೊಂಡು ಬಳಸುತ್ತಿರುವ ಶ್ರೀ ಜಗದ್ಗುರುಗಳವರ ಸಾಧನೆಗಳು ಹಲವಾರು. ಸಂಸ್ಕೃತ ವ್ಯಾಕರಣ ಕುರಿತು ಆಧುನಿಕ ರೀತಿಯಲ್ಲಿ ಅಧ್ಯಯನ ನಡೆಸಲು ಅನುವುಮಾಡಿಕೊಡುವ ಶ್ರೀ ಜಗದ್ಗುರುಗಳವರು ‘ಗಣಕಾಷ್ಟಾಧ್ಯಾಯಿ’ ತಂತ್ರಾಂಶ ಮತ್ತು ವಚನ ಸಾಹಿತ್ಯದ ಸೊಗಡನ್ನು ವಿಶ್ವದೆಲ್ಲೆಡೆ ಪ್ರಸರಿಸುತ್ತಿರುವ ‘ಗಣಕ ವಚನ ಸಂಪುಟ’ , ಬಸವಾದಿ ಶರಣರ 20 ಕ್ಕೂ ಅಧಿಕ ವಚನಗಳ ವಿವಿಧ ಭಾಷೆಗಳಲ್ಲಿ ಲಭ್ಯವಿರುವ ಮೊಬೈಲ್ ಆಪ್, ಮಧ್ಯವರ್ತಿಗಳ ಹಾವಳಿ ತಡೆಗಟ್ಟಿ ರೈತರ ‌ಬರಪರಿಹಾರಕ್ಕಾಗಿ ರೂಪಿಸಿದ ಭೂಮಿ ಆನ್ಲೈನ್ ತಂತ್ರಾಂಶ ಸೇರಿದಂತೆ ಹಲವಾರು ಗಣಕೀಕರಣ ಯೋಜನೆಗಳು ನಾಡ ಜನರ ಅನುಕೂಲಕ್ಕೆ ಕಾರಣೀಕೃತವಾಗಿವೆ.

1997ರಲ್ಲಿ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ನಡೆದ 10ನೇ ವಿಶ್ವ ಸಂಸ್ಕೃತ ಸಮ್ಮೇಳನದ ಸಂಘಟನಾ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀ ಜಗದ್ಗುರುಗಳವರು ಕಾರ್ಯನಿರ್ವಹಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಜ್ಞಾನ ಎರಡನ್ನೂ ಸಹ ಹದವಾಗಿ ಸಮ್ಮಿಳನಗೊಳಿಸುವ ಮೂಲಕ ಶ್ರೀ ಜಗದ್ಗುರುಗಳವರು ಹಲವು ಕಾರ್ಯಕ್ಷೇತ್ರಗಳಲ್ಲಿ ಯಶೋಸಾಧನೆಗೆ ‌ಭಾಜನರಾಗಿದ್ದಾರೆ. 1994ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ 9ನೇ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಈ ‘ಗಣಕಾಷ್ಟಾಧ್ಯಾಯಿ’ ತಂತ್ರಾಂಶದ ಪ್ರಾತ್ಯಕ್ಷಿಕೆಯನ್ನು ಮೊದಲ ಬಾರಿಗೆ ಶ್ರೀ ಜಗದ್ಗುರುಗಳವರು ನೀಡಿದ್ದರು.

‘ಗಣಕಾಷ್ಟಾಧ್ಯಾಯಿ’ – ಸಂಸ್ಕೃತ ವ್ಯಾಕರಣ ಕುರಿತ ‘ಕಂಪ್ಯೂಟರ್ ತಂತ್ರಾಂಶ’: ‘ಗಣಕಾಷ್ಟಾಧ್ಯಾಯಿ(ಆವೃತ್ತಿ 5.0)’ ಸಂಸ್ಕೃತದ ಅದ್ವಿತೀಯ ವೈಯಾಕರಣಿಯಾದ ಪಾಣಿನಿಯ ಸೂತ್ರಗಳನ್ನು ಆಧರಿಸಿರುವ ಸಂಸ್ಕೃತ ವ್ಯಾಕರಣ ಕುರಿತ ವಿಶಿಷ್ಟವಾದ ತಂತ್ರಾಂಶ. ‘ಪಾಣಿನಿಯ ಅಷ್ಟಾಧ್ಯಾಯಿ’ ಎಂಬ ಮೂಲ ಕೃತಿಯಿಂದ ಈ ತಂತ್ರಾಂಶದ ಹೆಸರನ್ನು ಸೃಜಿಸಲಾಗಿದೆ. ಗಣಕದ ಮೂಲಕ ತಂತ್ರಾಂಶವನ್ನು ಸಿದ್ಧಪಡಿಸಿರುವ ಕಾರಣ, ಈ ತಂತ್ರಾಂಶಕ್ಕೆ ‘ಗಣಕಾಷ್ಟಾಧ್ಯಾಯಿ’ ಎಂದು ಹೆಸರು ನೀಡಲಾಗಿದೆ. ಸಂಸ್ಕೃತ ವ್ಯಾಕರಣ ಕುರಿತು ಎಂಟು ಅಧ್ಯಾಯಗಳಿರುವ ‘ಅಷ್ಟಾಧ್ಯಾಯಿ’ ಎಂಬ ಹೆಸರಿನ ಮೇರು ಕೃತಿಯನ್ನು ರಚನೆ ಮಾಡಿರುವ ಪಾಣಿನಿಯು ಕ್ರಿಸ್ತಪೂರ್ವ 5ನೇ ಶತಮಾನದಲ್ಲಿ ಜೀವಿಸಿದ್ದನು. ಮೂಲ ಕೃತಿಯಲ್ಲಿ ಸುಮಾರು 4000 ಸೂತ್ರಗಳು ಇವೆ. (ಪ್ರತಿಯೊಂದು ಸೂತ್ರವೂ ಒಂದು ಸರಳ ವಾಕ್ಯದಷ್ಟು ಉದ್ದ ಮಾತ್ರ ಇದೆ. ಕೆಲವು ಸೂತ್ರಗಳಂತೂ ಕೇವಲ ಒಂದು ಪದ ಅಥವಾ ಹಲವು ಪದಗಳು ಮಾತ್ರ ಆಗಿವೆ.) ಈ ಸೂತ್ರಗಳು ಅತ್ಯಂತ ಸಂಕ್ಷಿಪ್ತವಾಗಿದ್ದು ಸಂಸ್ಕೃತ ಭಾಷೆಯ ವೈಜ್ಞಾನಿಕ ತಳಹದಿಯ ದ್ಯೋತಕವಾಗಿವೆ. ಈ ಕೃತಿಯು ಸಂಸ್ಕೃತ ಭಾಷೆಯ ಇಡೀ ವ್ಯಾಕರಣವನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ವಿವರಿಸುತ್ತದೆ. ಒಂದು ಭಾಷೆಯ ವ್ಯಾಕರಣವನ್ನು ಈ ರೀತಿಯಲ್ಲಿ ವಿವರಿಸುವ ಮತ್ತೊಂದು ಕೃತಿಯು ವಿಶ್ವದ ಯಾವುದೇ ಇತರ ಭಾಷೆಗಳಲ್ಲಿ ಕಂಡುಬರುವುದಿಲ್ಲ. ತರ್ಕಬದ್ಧವಾದ ಈ ಕೃತಿಯನ್ನು ಕಂಪ್ಯೂಟರ್‌ಗೆ ಅಳವಡಿಸಿರುವುದು ಶ್ರೀ ಜಗದ್ಗುರುಗಳವರು ವಿಶಿಷ್ಟ ಕಾರ್ಯವಾಗಿದೆ.

ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಧಾರ್ಮಿಕ ನೇತಾರರಾಗಿ ಇಂತಹ ವಿಶಿಷ್ಟ ಕೃತಿಯನ್ನು ಕಂಪ್ಯೂಟರ್ ಪ್ರೋಗ್ರಾಮಿಂಗ್ ಮೂಲಕ ಗಣಕ ತಂತ್ರಾಂಶವನ್ನಾಗಿ ರೂಪಿಸಿದ್ದಾರೆ. ಈ ತಂತ್ರಾಂಶವು ಸಂಸ್ಕೃತದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅಧ್ಯಯನಕ್ಕೆ ಅನುಕೂಲವಾಗುವಂತೆ ರಚಿಸಲಾಗಿದೆ. ಇದರಿಂದಾಗಿ ಸಂಸ್ಕೃತ ವ್ಯಾಕರಣ ಅಭ್ಯಾಸವು ಸುಲಭವಾಗಿದೆ.

‘ಗಣಕ ವಚನ ಸಂಪುಟ’ ಎಂಬ ಹೆಸರಿನ ಕಂಪ್ಯೂಟರ್ ತಂತ್ರಾಂಶವನ್ನು ಸ್ವಾಮೀಜಿಯವರು ನಿರ್ಮಿಸಿದ್ದಾರೆ. ಭಾರತೀಯ ಸಾಹಿತ್ಯ ಪ್ರಕಾರದಲ್ಲಿಯೇ ವಿಶಿಷ್ಟ ಸ್ಥಾನವನ್ನು ಹೊಂದಿರುವ ವಚನ ಸಾಹಿತ್ಯದ ಪ್ರಸಾರದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಸ್ವಾಮೀಜಿಯವರು ಈ ವಚನ ಸಂಪುಟದಲ್ಲಿ ಬಸವಣ್ಣನವರ 1426 ವಚನಗಳು ಮತ್ತು ಇತರ ಶರಣರ 18 ಸಾವಿರ ವಚನಗಳನ್ನು ಇದರಲ್ಲಿ ಅಳವಡಿಸಿದ್ದಾರೆ. ಕಂಪ್ಯೂಟರ್ ತಂತ್ರಾಂಶ ಗುಣಲಕ್ಷಣಗಳಾದ ಹುಡುಕುವುದು ಮತ್ತು ಸೂಚೀಕರಣ ಹಾಗೂ ವಿಂಗಡಣೆಯ ಸೌಲಭ್ಯಗಳನ್ನು ಬಳಸಿ ವಿವಿಧ ವಿಷಯ ಕುರಿತು, ವಿವಿಧ ರಚನೆಕಾರರ ವಚನಗಳನ್ನು ಸುಲಭವಾಗಿ ಹುಡುಕಿ, ವಿಂಗಡಿಸಿ ಪತ್ತೆಮಾಡಿ, ಅವುಗಳನ್ನು ಓದಿಕೊಳ್ಳಬಹುದು, ಕನ್ನಡೇತರರಿಗೆ ಈ ವಚನ ಸಾಹಿತ್ಯದ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಈ ಎಲ್ಲಾ ವಚನಗಳ ಅರ್ಥವನ್ನು ಇಂಗ್ಲಿಷ್ ಭಾಷೆಯಲ್ಲಿಯೂ ಸಹ ನೀಡಲಾಗಿದೆ. ಅಲ್ಲದೆ, ಕನ್ನಡ ಲಿಪಿ ಬಾರದವರೂ ವಚನದ ಉಚ್ಛಾರವನ್ನು ಮಾಡಲು ಅನುಕೂಲವಾಗುವಂತೆ ವಚನಗಳನ್ನು ರೋಮನ್ ಲಿಪಿಯಲ್ಲಿಯೂ ಸಹ ನೀಡಲಾಗಿದೆ. ಕನ್ನಡ ಲಿಪಿಯನ್ನು ಕಂಪ್ಯೂಟರ್‌ನಲ್ಲಿ ಮೂಡಿಸಲು ಮಠದ ವತಿಯಿಂದಲೇ ಪ್ರತ್ಯೇಕ ಕನ್ನಡ ಲಿಪಿ ತಂತ್ರಾಂಶವನ್ನು ಸಿದ್ಧಪಡಿಸಿ ಅಳವಡಿಸಲಾಗಿದೆ. ಬಳಕೆಗೆ ಸುಲಭವಾದ ಕೀಲಿಮಣೆ ವಿನ್ಯಾಸವನ್ನೂ ಸಹ ಅಳವಡಿಸಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top