ದಾವಣಗೆರೆ: ತಾಂಡಾ ಅಭಿವೃದ್ಧಿ ನಿಗಮಕ್ಕೆ ಸರ್ಕಾರ 960 ಕೋಟಿ ರೂ. ನೀಡಲಾಗಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ 52 ಸಾವಿರ ಜನರಿಗೆ ಹಕ್ಕುಪತ್ರವನ್ನು ಇತ್ತೀಚೆಗೆ ಪ್ರಧಾನಿಗಳಿಂದ ಕೊಡಿಸಲಾಗಿದೆ. ಮಾರ್ಚ್ ತಿಂಗಳಲ್ಲಿ ಹೊನ್ನಾಳಿ, ನ್ಯಾಮತಿ ತಾಲೂಕಿನ ಗೊಲ್ಲರಹಟ್ಟಿ, ಕುರುಬರಹಟ್ಟಿ, ಲಂಬಾಣಿ ತಾಂಡಾಗಳಿಗೆ ಇನ್ನೂ 52 ಸಾವಿರ ಜನರಿಗೆ ಹಕ್ಕು ಪತ್ರ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಅವರ 284ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.ಬಂಜಾರ ಸಮಾಜ ವೈಶಿಷ್ಟ್ಯಪೂರ್ಣ ಸಮಾಜವಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿದೆ.ಸಂತ ಸೇವಾಲಾಲ್‌ರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಶ್ರೀ ಸಂತ ಸೇವಾಲಾಲ್ ಮಹಾಮಠ ಪ್ರತಿಷ್ಠಾನಕ್ಕೆ 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗುವುದು .
ಸುರಗೊಂಡನಗೊಪ್ಪ ಇಡೀ ದೇಶಕ್ಕೆ ತಿಳಿಯಬೇಕು, ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಅದಕ್ಕಾಗಿ ಹಕ್ಕುಪತ್ರಗಳನ್ನು ನೀಡಿರುವ ಗ್ರಾಮಗಳಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಅಡಿಯಲ್ಲಿ ಲಿಡ್ಕರ್ ಮಾದರಿ ಕಾರ್ಯಕ್ರಮವನ್ನು ರೂಪಿಸಲಾಗುವುದು. ಈ ಸಮಾಜದ ಮಕ್ಕಳು ಶಿಕ್ಷಣವನ್ನು ಪಡೆಯಲು ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ. ಈ ಸಮುದಾಯದ ವಸತಿ ಹೆಚ್ಚಿರುವಲ್ಲಿ ವಿಶೇಷ ವಸತಿ ಶಾಲೆಗಳನ್ನು ನಿರ್ಮಿಸಲಾಗುವುದು. ಕೊಪ್ಪಳದ ಬಹದ್ದೂರ್ ಬಂಡೆಯಲ್ಲಿ ಹೆರಿಟೇಜ್ ವಿಲೇಜ್, ಬೀದರ್ ಜಿಲ್ಲೆಯಲ್ಲಿ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮವನ್ನು ತಾಂಡಾ ಅಭಿವೃದ್ಧಿ ನಿಗಮದಿಂದ ವಿಶೇಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಸಚಿವ ಪ್ರಭು ಚವ್ಹಾಣ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕ ಪಿ.ರಾಜೀವ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.