ದಾವಣಗೆರೆ: ಕಳಪೆ ಕಾಮಗಾರಿ ಸಹಿಸಲ್ಲ, ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ 38ನೇ ವಾರ್ಡ್ ಎಂಸಿಸಿ ಬಿ ಬ್ಲಾಕ್ ನ ಮೂರನೇ ಮುಖ್ಯ ರಸ್ತೆಯ ಎರಡನೇ ತಿರುವಿನಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ವೀಕ್ಷಿಸಿದ ವೇಳೆ ಮಾತನಾಡಿದ ಅವರು, ಗುತ್ತಿದೆದಾರರು ಕಾಮಗಾರಿ ಕುರಿತಂತೆ ಗುಣಮಟ್ಟ ಕಾಪಾಡಿಕೊಳ್ಳಬೇಕು. ಜನರು ಮೆಚ್ಚುಗೆ ವ್ಯಕ್ತಪಡಿಸುವ ರೀತಿಯಲ್ಲಿ ಕೆಲಸ ಆಗಬೇಕು ಎಂದರು.
ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ವಾರ್ಡ್ ನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಈಗ ನಡೆಯುತ್ತಿರುವ ಕಾಂಕ್ರಿಟ್ ಕಾಮಗಾರಿ ವೀಕ್ಷಿಸಲು ಆಯುಕ್ತರು ಆಗಮಿಸಿದ್ದು ಖುಷಿ ತಂದಿದೆ. ಗುತ್ತಿಗೆದಾರರಿಗೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.
ಕಾಂಕ್ರಿಟ್ ರಸ್ತೆ ಆಗಬೇಕೆಂಬ ಜನರ ಬೇಡಿಕೆ ಈಡೇರಿಸಿದ್ದೇವೆ. ಮನೆ ಬಾಗಿಲಿಗೆ ಹೋಗಿ ಜನರ ಸೇವಕನಂತೆ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ವಾರ್ಡ್ ನ ಜನರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಇದು ಸಂತಸ ತಂದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಇಇ ಮನೋಹರ್, ಗುತ್ತಿಗೆದಾರ ಹನುಮಂತ ನಾಯ್ಕ್, ಎಂಸಿಸಿ ಬಿ ಬ್ಲಾಕ್ ನ ಹಿರಿಯರು, ಸ್ಥಳೀಯರು, ಸಾರ್ವಜನಿಕರು ಉಪಸ್ಥಿತರಿದ್ದರು.



