ದಾವಣಗೆರೆ: ಕಳೆದ ಎರಡು ತಿಂಗಳಿನಿಂದ ಅಡಿಕೆ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 1.35 ಲಕ್ಷ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.
ಮಾಯಕೊಂಡದ ಆಕಾಶ, ಸುರೇಶ, ಶಿವು, ಸುರೇಶ, ಮಂಜುನಾಥ ಬಂಧಿತ ಆರೋಪಿಗಳಾಗಿದ್ದಾರೆ. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ವಿಠಲಾಪುರ, ಅಣಬೇರು, ಹದಡಿ ಹಾಗೂ ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದ ಬಳಿ ಕಳೆದ ಎರಡು ತಿಂಗಳಿನಿಂದ ಅಡಿಕೆ ಕಳ್ಳತನ ಮಾಡುತ್ತಿದ್ದರು.
ತೋಳಹುಣಸೆ ವಿಶ್ವವಿದ್ಯಾಲಯದ ಬಳಿ ಒಣಗಿಸಲು ಇಟ್ಟಿದ್ದ ಅಡಿಕೆ ಎರಡು ತಿಂಗಳ ಹಿಂದೆ ಕಳ್ಳತನವಾದ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿತರ ಪತ್ತೆಗೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಎಎಸ್‌ಪಿ ಕನ್ನಿಕಾ ಸಿಕ್ರಿವಾಲ್ ಅವರ ಮಾರ್ಗದರ್ಶನದಲ್ಲಿ ಮಾಯಕೊಂಡ ಸರ್ಕಲ್ ಇನ್‌ಸ್ಪೆಕ್ಟರ್ ತಿಮ್ಮಣ್ಣ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಮಾಯಕೊಂಡ ಠಾಣೆಯ ಪಿಎಸ್‌ಐ ರೂಪ್ಲಿಬಾಯಿ, ಎಎಸ್‌ಐ ಚಂದ್ರಶೇಖರ, ಸಿಬ್ಬಂದಿ ಲೋಕಾನಾಯ್ಕ, ಶಶಿಕುಮಾರ, ಬಸವರಾಜ ಹಾಗೂ ಹದಡಿ ಠಾಣೆಯ ಚನ್ನಕೇಶವ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 3 ಕ್ವಿಂಟಲ್ ಒಣ ಅಡಿಕೆ ಮತ್ತು ಕೃತ್ಯಕ್ಕೆಬಳಸಿದ್ದ 3 ಲಕ್ಷ ಮೌಲ್ಯದ ಆಟೋ ಹಾಗೂ ಅಡಿಕೆ ಮಾರಾಟ ಮಾಡಿದ 20,000 ವಶಪಡಿಸಿಕೊಂಡಿದ್ದಾರೆ. ಎಸ್‌ಪಿ ಸಿ.ಬಿ. ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ ಪೊಲೀಸರ ಕಾರ್ಯವನ್ನು ಪ್ರಶಂಸಿದ್ದಾರೆ.



