ದಾವಣಗೆರೆ: 5 ವರ್ಷಗಳ ಕಾಲ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿತ್ತು. ಕಾಂಗ್ರೆಸ್ ಅಂದರೆ ಕಮಿಷನ್, ಕಮಿಷನ್ ಅಂದ್ರೆ ಕಾಂಗ್ರೆಸ್ ಎನ್ನುವಂತಾಗಿತ್ತು. ಎಲ್ಲ ಇಲಾಖೆಯಲ್ಲಿ ಕಮಿಷನ್ ಪಡೆದಿರುವುದು ಕಾಂಗ್ರೆಸ್ ಪಕ್ಷದ ವಾಡಿಕೆಯಾಗಿತ್ತು. ಹೀಗಾಗಿ ಯಾವ ಪುರುಷಾರ್ಥಕ್ಕೆ ರಾಜ್ಯದ ಜನರು ನಿಮಗೆ ಅಧಿಕಾರ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಹರಿಹರ ಪಟ್ಟಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವ ಕಾರಣಕ್ಕೆ ಮತ್ತೆ ಜನರು ನಿಮ್ಮನ್ನು ಗೆಲ್ಲಿಸಬೇಕು. ಅಧಿಕಾರದಲ್ಲಿದ್ದಾಗ ಯಾವ ಕೆಲಸ ಮಾಡದೇ, ಈಗ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಹೋಗುತ್ತೀರಾ?ಕಾಂಗ್ರೆಸ್ ನೀಡಿದ್ದು ಭಾಗ್ಯಗಳನ್ನಲ್ಲ, ದೌರ್ಭಾಗ್ಯವನ್ನು. ಅಕ್ಕಿ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವಾಗಿದೆ. ಚೀಲ ಕೊಟ್ಟಿದ್ದು ಮಾತ್ರ ಸಿದ್ದರಾಮಯ್ಯ ಸರ್ಕಾರವಾಗಿದೆ. ಕೇಂದ್ರದಿಂದ ನೆರವು ನೀಡಿದ ಕಾರಣಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ಧಿ ಎಂಬುದು ಜನರಿಗೆ ಗೊತ್ತಿದೆ. ಹಾಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕೈ ಕೊಟ್ಟು ಬಿಜೆಪಿ ಕೈ ಹಿಡಿಯುವುದು ಖಚಿತವಾಗಿ ಎಂದರು
ಪ್ರತಿಯೊಂದು ಜಿಲ್ಲೆ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗಾರಿಕೆ ನಗರ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಹರಿಹರ ಕೈಗಾರಿಕೆ ಕ್ಷೇತ್ರವಾಗಿತ್ತು, ಆದರೆ ಈಗ ಎಲ್ಲವೂ ಬಂದ್ ಆಗಿರುವುದು ದುರ್ದೈವದ ಸಂಗತಿಯಾಗಿದೆ. ಮತ್ತೆ ಹರಿಹರವನ್ನು ಕೈಗಾರಿಕೆ ಕ್ಷೇತ್ರವನ್ನಾಗಿ ಮಾಡಿಯೇ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು. ಹರಿಹರದಲ್ಲಿ ಹಾಲುಮತದ ಜನರು ಹೆಚ್ಚಿದ್ದಾರೆ. ಅವರು ಮಳೆ, ಗಾಳಿ ಬಿಸಿಲು ಎನ್ನದೇ ಜೀವನ ಮಾಡುತ್ತಾರೆ. ಕುರಿಗಾರಿಕೆಗೆ ನಾವು ಕುರಿಗಳನ್ನು ಕೊಡುತ್ತಿದ್ದು, ಇದಕ್ಕಾಗಿಯೇ 354 ಕೋಟಿ ರೂಪಾಯಿ ಮೀಸಲು ಇಡಲಾಗಿದೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ರಾಜ್ಯದಲ್ಲಿ 125ಕ್ಕಿಂತ ಹೆಚ್ಚಿನ ಸ್ಥಾನ ಬಿಜೆಪಿಗೆ ಲಭಿಸುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಬಸವರಾಜ ಬೊಮ್ಮಾಯಿ ಅವರು 152 ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದಾರೆ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ರಾಜ್ಯಾದ್ಯಂತ ಜನಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ಪಕ್ಷಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ. ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೋ ಅವರ ಜಯಕ್ಕಾಗಿ ಹಗಲಿರುಳು ಶ್ರಮಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ. ಎಸ್. ನವೀನ್, ಶಿವಯೋಗಿ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಶಾಸಕ ಬಿ.ಪಿ. ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



