ದಾವಣಗೆರೆ; ಸೊಸೆಯೊಬ್ಬಳು ವೃದ್ಧ ಮಾವನ ಮೈಮೇಲೆ ಬಿಸಿ ನೀರು ಸುರಿದು,ಕಾರದಪುಡಿ ಎರಚಿ ಒನಕೆಯಿಂದ ಹೊಡೆದು ಕೊಂದಿರುವ ಘಟನೆ ಜಿಲ್ಲೆಯ ಹರಿಹರದ ವಿದ್ಯಾನಗರದಲ್ಲಿ ನಡೆದಿದೆ.
ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿ ಹರಿಹರದ ವಿದ್ಯಾನಗರದಲ್ಲಿ ವಾಸವಿದ್ದ ಜ್ಯೋತಿ ಎಂಬ ಮಹಿಳೆ, ಗಂಡ ಕೆಲಸಕ್ಕೆ ಹೋಗಿದ್ದ ವೇಳೆ ಈ ಕೃತ್ಯ ನಡೆಸಿದ್ದಾರೆ. ಮಂಚದ ಮೇಲೆ ಮಲಗಿದ್ದ ಮಾವ ಶಿವಕುಮಾರ (70) ಮೇಲೆ ಬಿಸಿ ನೀರು ಸುರಿದು ಕಾರದ ಪುಡಿ ಎರಚಿ ವೇಲ್ ನಿಂದ ಕಟ್ಟಿ ಹಾಕಿ ಒನಕೆಯಿಂದ ಹೊಡೆದು ಕೊಂದು ಹಾಕಿದ್ದಾರೆ. ಕೆಲಸಕ್ಕೆ ಹೋಗಿದ್ದ ಜ್ಯೋತಿ ಗಂಡ ವೀರೇಶ್ ಗೆ ಮನೆಯ ಅಕ್ಕಪಕ್ಕದವರು ಮಾಹಿತಿ ನೀಡಿದ್ದಾರೆ. ಕೂಡಲೇ ಮನೆಗೆ ಬಂದು ನೋಡಿದ್ದಾಗ ತಂದೆ ಶಿವಕುಮಾರ್ ಸಾವನ್ನಪ್ಪಿದ್ದರು.
ಮೈಯಲ್ಲಿ ಸುಟ್ಟ ಗಾಯಗಳು, ಕಾರದ ಪುಡಿ, ವೇಲ್ , ಒನಕೆ ಇತ್ತು ಎಂದು ಹರಿಹರ ನಗರ ಠಾಣೆಯಲ್ಲಿ ವೀರೇಶ್ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದೂರಿನ ಆಧಾರದ ಮೇಲೆ ಜ್ಯೋತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಯುತ್ತಿದೆ.



