ದಾವಣಗೆರೆ: ದೀಪಾವಳಿ ಹಬ್ಬದ ಹಿನ್ನಲೆ ನಗರದ ಹೃದಯ ಭಾಗದಲ್ಲಿರುವ ಹೈಸ್ಕೂಲ್ ಮೈದಾನ ಹಾಗೂ ಮೋತಿ ವೀರಪ್ಪ ಕಾಲೇಜ್ ಮೈದಾನದದಲ್ಲಿ 80 ಪಟಾಕಿ ಮಾರಾಟ ಮಳಿಗೆ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅ.24 ರಿಂದ 26ರವರೆಗೆ ಹೈಸ್ಕೂಲ್ ಮೈದಾನದಲ್ಲಿ 50 ಹಾಗೂ ಮೋತಿ ವೀರಪ್ಪ ಕಾಲೇಜ್ ಮೈದಾನದಲ್ಲಿ 30 ಪಟಾಕಿ ಮಾರಾಟ ಮಳಿಗೆ ತೆರೆಯಲು, ಪಟಾಕಿ ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ಮಳಿಗೆ 1 ಸಾವಿರ ರೂಪಾಯಿ ಶಾಲಾ ಅಭಿವೃದ್ಧಿ ಸಮಿತಿಗೆ ಕಟ್ಟುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚಿಸಿದ್ದಾರೆ.
ಜಿಲ್ಲಾಡಳಿತದ ಈ ನಿರ್ಧರಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎರಡು ಸ್ಥಳಗಳು ನಗರದ ಹೃದಯ ಭಾಗದಲ್ಲಿದ್ದು, ಮಳಿಗೆ ತೆರೆಯುವುದರಿಂದ ತೀವ್ರ ಸಂಚಾರ ದಟ್ಟಣಿ ಉಂಟಾಗುತ್ತದೆ. ಇದಲ್ಲದೆ ಪರಿಸರಕ್ಕೆ ಹಾನಿಯಾಗುತ್ತದೆ. ಹೀಗಾಗಿ ನಗರದ ಹೊರ ವಲದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಪರಿಸರ ಸಂರಕ್ಷಣೆ ವೇದಿಕೆಯ ಗಿರೀಶ್ ದೇವರಮನಿ ಹಾಗೂ ಸಾಮಾಜಿಕ ಕಾರ್ಯಕರ್ತ ಜಿ.ಎಂ. ಶ್ರೀಕಾಂತ್ ಆಗ್ರಹಿಸಿದ್ದಾರೆ.



