ಡಿವಿಜಿ ಸುದ್ದಿ, ದಾವಣಗೆರೆ : ತಾಲ್ಲೂಕಿನ ಕಾಡಜ್ಜಿ, ಬೇತೂರು, ಕಡ್ಲೇಬಾಳು, ಕಕ್ಕರಗೊಳ್ಳ, ಬಸವನಾಳು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಬಿತ್ತನೆ ಹಂತದಿಂದ 30 ದಿನದ ಬೆಳೆಯಿದ್ದು, ಬೆಳೆಯಲ್ಲಿ ಲದ್ದಿ ಹುಳುವಿನ ಬಾಧೆ ಹೆಚ್ಚಾಗಿ ಕಂಡು ಬಂದಿದೆ.
ಈ ಕೀಟವು ಬೆಳೆಯ ಎಲೆ, ಕಾಂಡದ ಭಾಗವನ್ನು ಕೆರೆದು ತಿನ್ನುತ್ತದೆ ಮತ್ತು ಎಲೆಯ ಭಾಗದಲ್ಲಿ ಸರಣಿ ರಂಧ್ರ ಕೊರೆಯುತ್ತದೆ. ಒಂದು ಚಿಟ್ಟೆಯು 1,500 ರಷ್ಟು ಮೊಟ್ಟೆಗಳನ್ನು ಇಟ್ಟು ಶೀಘ್ರ ಗತಿಯಲ್ಲಿ ಸಂತಾನ ವೃದ್ಧಿಸಿಕೊಳ್ಳುತ್ತಾ, ಆ ಮೂಲಕ ಬೆಳೆಗಳಿಗೆ ತೀವ್ರ ಹಾನಿ ಮಾಡುತ್ತದೆ.ಆದ್ದರಿಂದ, ರೈತರು ಸಾಮೂಹಿಕವಾಗಿ ಅಗತ್ಯ ಹತೋಟಿ ಕ್ರಮ ಕೈಗೊಂಡರೆ ಮಾತ್ರ ಬೇಸಿಗೆ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯ.

ಲದ್ದಿ ಹುಳು ಹತೋಟಿ ಮಾಡಲು ರೈತರು ಇಮಾಮೆಕ್ಟಿನ್ ಬೆಂಜೋಯೆಟ್ ಅನ್ನು 0.4 ಗ್ರಾಂ/ಪ್ರತಿ ಲೀಟರ್ ನೀರಿಗೆ ಅಥವಾ ಲ್ಯಾಂಬ್ಡಾ ಸೈಲ್ಹೋತ್ರಿನ್ 2 ಮಿಲಿ/ಪ್ರತಿ ಲೀಟರ್ ನೀರಿಗೆ ಅಥವಾ ಸ್ಪಿನೋಸೈಡ್ –3 ಮಿಲಿ/ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಸುಳಿಯಲ್ಲಿ ಪೂರ್ಣವಾಗಿ ನೆನೆಯುವ ಹಾಗೆ ಸಿಂಪರಣೆ ಮಾಡಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಸಲಹೆ ಪಡೆಯುವಂತೆ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಹೆಚ್.ಕೆ ತಿಳಿಸಿದರು.
ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಲಿಂಗದಹಳ್ಳಿ ಗ್ರಾಮದ ಹನುಮಂತಪ್ಪ ಬಿನ್ ಗೋಪಾಲಪ್ಪನವರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತ ಹನುಮಂತಪ್ಪರವರು ಲದ್ದಿಹುಳು ಕುರಿತು ತಮ್ಮ ಅನುಭವ ಹಂಚಿಕೊಂಡರು, ಲದ್ದಿ ಹುಳು ಕಂಡ ತಕ್ಷಣವೇ ಇಲಾಖಾ ಅಧಿಕಾರಿಗಳ ಭೇಟಿ ಮಾಡಿ, ಅವರ ಮಾರ್ಗದರ್ಶನದಂತೆ 8 ರಿಂದ 10 ದಿನ ಅಂತರದಲ್ಲಿ ಎರಡು ಬಾರಿ ಇಮಾಮೆಕ್ಟಿನ್ ಬೆಂಜೋಯೇಟ್ ಸಿಂಪರಣೆ ಮಾಡಿದ್ದು, ಹುಳು ಹತೋಟಿಗೆ ಬಂದಿದೆ ಮತ್ತು 10 ದಿನಗಳ ನಂತರ ಇನ್ನೊಂದು ಸಿಂಪರಣೆ ಕೈಗೊಳ್ಳುತ್ತಿದ್ದೇನೆ. ಆದರೆ, ಈ ಕೀಟವು ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ಹರಿದು ಹೋಗುವುದರಿಂದ ಇದನ್ನು ತಡೆಯಲು ಪ್ರತಿಯೊಬ್ಬ ರೈತರು ಸಾಮೂಹಿಕವಾಗಿ ಸಂರಕ್ಷಣೆ ಕ್ರಮವನ್ನು ಅತೀ ತುರ್ತಾಗಿ ಕೈಗೊಂಡರೆ, ಹತೋಟಿ ಮಾಡಲು ಸಾಧ್ಯ ಎಂದು ಅಭಿಪ್ರಾಯಿಸಿದರು.



