ಡಿವಿಜಿ ಸುದ್ದಿ, ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿಯ ಇಂದಿರಾ ಕ್ಯಾಂಟೀನ್ ಯೋಜನೆಯ ಹೆಸರನ್ನು ಕೈ ಬಿಟ್ಟು` ಮಹರ್ಷಿ ವಾಲ್ಮೀಕಿ ಅನ್ನಕುಟೀರ’ ಎಂದು ಮರು ನಾಮಕಾರಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ ` ಮಹರ್ಷಿ ವಾಲ್ಮೀಕಿ ಅನ್ನ ಕುಟೀರ’ ಎಂದು ನಾಮಕರಣ ಮಾಡಬೇಕು ಎಂದು ಮಾಜಿ ಸಚಿವ ರಾಜೂಗೌಡರು ಮನವಿ ಮಾಡಿದ್ದಾರೆ. ಅವರ ಮನವಿ ಪರಿಶೀಲನೆ ನಡೆಸಿದ್ದು, ಸಿಎಂ ಜತೆ ಚರ್ಚಿಸಿ ಬೆಂಗಳೂರು ಹೊರತು ಪಡಿಸಿ ರಾಜ್ಯದ ಉಳಿದ ಸ್ಥಳಗಳಲ್ಲಿ ಹೆಸರು ಬದಲಾವಣೆ ಮಾಡಲಾಗುತ್ತದೆ ಎಂದರು.
ಕಂದಾಯ ಇಲಾಖೆ, ಆಹಾರ ಸರಬರಾಜು ಇಲಾಖೆಯಲ್ಲಿ ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ವೃದ್ದಾಪ್ಯ ವೇತನದ ವಿಷಯದಲ್ಲಿ ಹೆಚ್ಚಿನ ದೂರುಗಳು ಬರುತ್ತಿವೆ. ಅರ್ಹ ಫಲಾನುಭವಿಗಳಿಗೆ ವೃದ್ದಾಪ್ಯ ವೇತನ ಸಿಗುವಂತಾಗಬೇಕು. ಅದಕ್ಕಾಗಿ ವೃದ್ದಾಪ್ಯ ವೇತನಕ್ಕೆ ಆಧಾರ್ ಲಿಂಕ್ ಮಾಡಲು ಉದ್ದೇಶಿಸಿದ್ದೇವೆ ಎಂದು ಸಚಿವರು ತಿಳಿಸಿದರು.



