ಡಿವಿಜಿ ಸುದ್ದಿ, ತುಮಕೂರು: ಪೌರತ್ವ ಕಾಯ್ದೆ ವಿಚಾರವಾಗಿ ದೇಶದಾದ್ಯಂತ ಪಿತೂರಿ ನಡೆಯುತ್ತಿದ್ದು, ಆ ಪಿತೂರಿಯಲ್ಲಿ ತಾಲಿಬಾನಿಗಳು, ಕಾಂಗ್ರೆಸಿಗರು, ಕಮ್ಯೂನಿಸ್ಟ್ ಒಟ್ಟಾಗಿ ಸೇರಿದ್ದಾರೆ ಎಂದು ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರಾಶ್ರಿತರಿಗೆ ಪೌರತ್ವ ಕೊಡುವುದು ತಪ್ಪು ಎಂದರೆ, ಪಾಕಿಸ್ತಾನ ರಚನೆಗೆ ಕಾಂಗ್ರೆಸ್ ಅವಕಾಶ ಯಾಕೆ ಅವಕಾಶ ಕೊಟ್ಟಿತು. ಧರ್ಮ ಆಧಾರದ ದೇಶ ವಿಭಜನೆ ಮಾಡಿದ ಕಾಂಗ್ರೆಸ್, ಪಾಕಿಸ್ತಾನ ಎನ್ನುವ ಪಾಪದ ಕೂಸಿನ ಹುಟ್ಟಿಗೆ ಕಾರಣ ಎಂದು ಕಿಡಿಕಾರಿದರು.
ಪಾಕಿಸ್ತಾನ, ಬಾಂಗ್ಲದೇಶದಲ್ಲಿ ನಮ್ಮ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್ನರು ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕಾಗಿ ಅವರಿಗೆ ಪೌರತ್ವ ಕೊಡುವ ತಿರ್ಮಾನ ತೆಗೆದುಕೊಂಡಿದ್ದೇವೆ. ಅದನ್ನ ವಿರೋಧ ಮಾಡುವಷ್ಟೇ ವಿರೋಧವನ್ನು ದೇಶ ವಿಭಜನೆ ವೇಳೆ ಮಾಡಿದ್ದರೆ ಪಾಕಿಸ್ತಾನ ಹುಟ್ಟುತ್ತಲೆ ಇರಲಿಲ್ಲ. ಪಾಕಿಸ್ತಾನ ಕಾಂಗ್ರೆಸ್‌ನ ಪಾಪದ ಕೂಸು. ಅದಕ್ಕೆ ಅವರೇ ಹೊಣೆ’. ಪಾಕಿಸ್ತಾನ, ಬಾಂಗ್ಲಾದೇಶ, ಆಫಘಾನಿಸ್ಥಾನದಿಂದ ಭಯೋತ್ಪಾದಕ ಕಾರಣಕ್ಕೆ ಭಾರತಕ್ಕೆ ಬಂದಿದ್ಧಾರೆ. ಇಂತಹ ನಿರಾಶ್ರಿತರಿಗೆ ಭಾರತ ಪೌರತ್ವ ಕೊಡದೇ ಬೇರೆ ಯಾರು ಕೊಡಬೇಕು ಎಂದರು.
ಭಯೋತ್ಪಾದಕರಿಗೆ ಪೌರತ್ವ ಕೊಡಬೇಕು ಎಂದು ಕಾಂಗ್ರೆಸ್ ಭಯಸುತ್ತಿದೆ. ಭಯೋತ್ಪಾದಕರಿಗೆ ಪೌರತ್ವ ಕೊಟ್ಟರೆ ದೇಶದ ಕಥೆ ಏನಾಗಬೇಕು. ದೇಶದ ನಾಗರಿಕರ ರಕ್ಷಣೆ ನಮ್ಮ ಕರ್ತವ್ಯ ಅದನ್ನು ಮಾಡುತ್ತಿದ್ದೇವೆ. ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ತಾಲಿಬಾನಿಗಳ ಜತೆ ಸೇರಿ ಮೋದಿ ಸರ್ಕಾರ ಉರುಳಿಸುವ ಕೆಲಸ ಮಾಡುತ್ತಿವೆ. ಅದಕ್ಕೆ ದೇಶದ ಜನರು ಅವಕಾಶ ಕೊಡುವುದಿಲ್ಲ. ಇಲ್ಲೆ ಹುಟ್ಟಿ ಬೆಳೆದ ಮುಸಲ್ಮಾನರಿಗೆ ಯಾವುದೇ ತೊಂದರೆ ಇಲ್ಲ. ಅವರು ನಮ್ಮಂತೆ ಭಾರತೀಯರು. ಆದರೆ, ಬಾಂಗ್ಲಾದೇಶ ಪಾಕಿಸ್ತಾನ ಅಫ್ಘಾನಿಸ್ತಾನದಿಂದ ಬಂದ ಮುಸಲ್ಮಾನರು ನಿರಾಶ್ರಿತರಲ್ಲ. ಅವರು ಅಕ್ರಮ ನುಸುಳುಕೋರರಾಗಿ ಬಂದವರು. ಇಂತವರು ದೇಶಕ್ಕೆ ಅಪಾಯಕಾರಿ ಎಂದರು.