ಡಿವಿಜಿ ಸುದ್ದಿ, ದಾವಣಗೆರೆ : ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ದಾಖಲಾತಿ ನಿಖರವಾಗಿ ತಿಳಿಯಲು ಮುಂದಿನ ದಿನಗಳಲ್ಲಿ ಸ್ನೇಹ ಆ್ಯಪ್‍ನ್ನು ಪರಿಚಯಿಸಲಾಗುತ್ತಿದೆ ಉಪನಿರ್ದೇಶಕ ವಿಜಯ ಕುಮಾರ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನಾ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಮಾತೃವಂದನಾ ಸಪ್ತಾಹ ಹಾಗೂ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಿನಗಳಲ್ಲಿ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾತಿಯಿಲ್ಲದ ಮಕ್ಕಳು, ಗರ್ಭಿಣಿಯರ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ತರಹದ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಸ್ನೇಹ ಆ್ಯಪ್‍ನ್ನು ಅಭಿವೃದ್ಧಿ ಪಡಿಸಿದ್ದು ಈ ಆ್ಯಪ್‍ನ ಮೂಲಕ ಇಲಾಖೆಗೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿದಿನ ಹಾಜರಿದ್ದ ಮಕ್ಕಳ ಮತ್ತು ಮಾತೃವಂದನದಲ್ಲಿ ಹಾಜರಿದ್ದ ಗರ್ಭಿಣಿಯರ ಫೋಟೋ ವನ್ನು ಅಪೋಲೋಡ್ ಮಾಡಬೇಕಾಗುತ್ತದೆ. ಇದರಿಂದಾಗಿ ಆಹಾರ ಪದಾರ್ಥಗಳು ದುರುಪಯೋಗವಾಗುವುದಿಲ್ಲ ಎಂದು ತಿಳಿಸಿದರು.
ಗರ್ಭಿಣಿಯರು ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಮಾತೃವಂದನಾ ಮತ್ತು ಮಾತೃಪೂರ್ಣ ಯೋಜನೆಯು ಸಹಕಾರಿಯಾಗಿದ್ದು ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎರಡು ಯೋಜನೆಗಳಿಂದ 11 ಸಾವಿರ ಸಹಾಯಧನವನ್ನು ಗರ್ಭಿಣಿಯರು ಪಡೆಯಬಹುದಾಗಿದೆ ಎಂದರು.
ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಉಪಾಧ್ಯಕ್ಷ ಎ.ಬಿ.ಹನುಮಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ನಾಯ್ಕ್, ನಿಕಟಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎನ್ ನಾಗರಾಜ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ದಾರುಕೇಶ್ ಬಿ.ಎಂ ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.



