ದಾವಣಗೆರೆ: ದಾವಣಗೆರೆ ಪ್ರಾದೇಶಿಕ ವಿಭಾಗದ ಜಗಳೂರು ರಾಜ್ಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವನ್ಯಜೀವಿ ಭೇಟೆಯಾಡಲು ಸಂಚು ರೂಪಿಸಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಜುಲೈ 26 ರಂದು ಮರೇನಹಳ್ಳಿ ಸರ್ವೆ ನಂ.22 ರ ಖಾಸಗಿ ಜಮೀನಿನಲ್ಲಿ ವನ್ಯಜೀವಿಗಳನ್ನು ಬೇಟೆಯಾಡಲು ಬಲೆಗಳನ್ನು ಹಾಕಿದ್ದ ಆರೋಪಿಗಳನ್ನು ದಾವಣಗೆರೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಆರೋಪಿಯನ್ನು ಜಗಳೂರು ವಲಯ ಅರಣ್ಯಧಿಕಾರಿ ಮತ್ತು ಸಿಬ್ಬಂದಿ ವರ್ಗ ಕಾರ್ಯಚರಣೆ ನಡೆಸಿ ಜಗಳೂರು ತಾಲ್ಲೂಕು ಬಸವೇಶ್ವರ ಬಡಾವಣೆ ಹನುಮಂತ ಎಂಬ ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ.
ವನ್ಯಜೀವಿ ಕಾಯ್ದೆ 1972 ರ ಕಲಂಗಳ ಅನ್ವಯ ಕೇಸನ್ನು ದಾಖಲಿಸಿ ನ್ಯಾಯಾಲಯದ ಬಂಧನಕ್ಕೆ ಒಪ್ಪಿಸಿದ್ದು, ಮತ್ತೋರ್ವ ಆರೋಪಿ ಭರಮಸಾಗರದ ನಿವಾಸಿ ಕುಮಾರ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಂದ 3 ಬಲೆ, 1 ಬೈಕ್, 1 ಸುತ್ತಿಗೆ, 1 ಕುಡುಗೋಲು, 1 ಮೊಬೈಲ್ ವಶಕ್ಕೆ ಪಡೆದು ಸುರಕ್ಷತೆ ದೃಷ್ಠಿಯಿಂದ ಜಗಳೂರು ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಇರಿಸಲಾಗಿದೆ. ಮುಂದಿನ ತನಿಖೆಯನ್ನು ದಾವಣಗೆರೆ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಾಂತ್ರಿಕ ಸಹಾಯಕರು ಕೈಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.



