ದಾವಣಗೆರೆ: ಒಮ್ಮೆಯಾದರೂ ಖಾಕಿ ಡ್ರಸ್ ನಲ್ಲಿ ಎಸ್ ಪಿ ಸೀಟ್ ನಲ್ಲಿ ಕೂರಬೇಕು ಎಂಬ ವಿಶೇಷ ಚೇತನ ಯುವತಿಯ ಆಸೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಈಡೇರಿಸಿದೆ. ಇದರಿಂದ ಆ ಯುವತಿ ಮತ್ತು ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇರಲಿಲ್ಲ.
ನಗರದಲ್ಲಿ ಕಂಪ್ಯೂಟರ್ ಟೈಪಿಂಗ್ ಅಂಗಡಿ ಇಟ್ಟುಕೊಂಡಿರುವ ಕೆಟಿಜೆ ನಗರ ನಿವಾಸಿ ವಿಜಯಲಕ್ಷ್ಮೀ ಎಂಬುವರ ಪುತ್ರಿ 18 ವರ್ಷದ ಸಾಧನಾ ಎಂ.ಪಾಟೀಲ್ ಮಿದುಳು ವಾತ ಕಾಯಿಲೆಯಿಂದ ಬಳಲುತ್ತಿದ್ದು, ಓದಿನಲ್ಲಿ ಚುರುಕಾಗಿರುವ ಸಾಧನಾ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.76 ಅಂಕ ಗಳಿಸಿದ್ದು, ಬಾಲ್ಯದಿಂದಲೂ ಎಸ್ಪಿ ಆಗಬೇಕು ಎಂಬ ಕನಸಿತ್ತು. ಆರೋಗ್ಯ ಸಮಸ್ಯೆಯಿಂದ ಇದು ಸಾಧ್ಯವಿಲ್ಲ. ಆದರೆ, ಮಗಳನ್ನು ಪೊಲೀಸ್ ಅಧಿಕಾರಿಯ ವೇಷದಲ್ಲಿ ನೋಡಬೇಕು ಎಂಬ ಅಪೇಕ್ಷೆಯಿಂದ ವಿಜಯಲಕ್ಷ್ಮೀ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಬಳಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಆಸೆಯಲ್ಲಿ ಜಿಲ್ಲಾ ಪೊಲೀಸರು ಈಡೇರಿಸಿದ್ದಾರೆ.
ಪೊಲೀಸ್ ಡ್ರಸ್ ನಲ್ಲಿ ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್ ಅವರ ಪಕ್ಕದಲ್ಲಿ 45 ನಿಮಿಷ ಕಾಲ ಕೂರಲು ಅವಕಾಶ ಮಾಡಿಕೊಡಲಾಗಿತ್ತು. ಯುವತಿ ಧರಿಸಿದ್ದ ಡ್ರಸ್ ಮೇಲೆ ಸಾಧನಾ ಎಂ.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಾವಣಗೆರೆ ಎಂದು ಬರೆದ ನೇಮ್ ಪ್ಲೇಟ್ ಹಾಕಲಾಗಿತ್ತು. ಈ ದೃಶ್ಯವನ್ನು ತಾಯಿ ವಿಜಯಲಕ್ಷ್ಮೀ ಮತ್ತು ಕುಟುಂಬದವರು ನೋಡಿ ಸಂತೋಷ ಪಟ್ಟರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಇದ್ದರು.