ಡಿವಿಜಿ ಸುದ್ದಿ, ಮಂಡ್ಯ: ತೀವ್ರ ಕುತೂಹಲ ಮೂಡಿಸಿದ್ದ ಉಪ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಾಳೆ (ಸೋಮವಾರ) ಬೆಳಿಗ್ಗೆ 8ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, 258 ಇವಿಎಂ ಯಂತ್ರಗಳಲ್ಲಿ ಭದ್ರವಾಗಿರುವ ಮತಗಳ ಎಣಿಕೆ ನಡೆಯಲಿದೆ. 14 ಟೇಬಲ್ ಗಳಲ್ಲಿ 19ಸುತ್ತುಗಳಲ್ಲಿ ಎಣಿಕೆ ಆಗಲಿದ್ದು, ಫಲಿತಾಂಶಕ್ಕೆ ಚುನಾವಣಾ ಆಯೋಗದ ನಿರ್ದೇಶನದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 10.30ರ ವೇಳೆಗೆ ಫಲಿತಾಂಶ ಹೊರ ಬೀಳಲಿದೆ ಎಂದು ಚುನಾವಣಾಧಿಕಾರಿ ಹೆಚ್. ಕೆ.ಕೃಷ್ಣಮೂರ್ತಿ ಮತ್ತು ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ್ ಎಂ.ಶಿವಮೂರ್ತಿ ಸುದ್ದಿಗಾರಿಗೆ ತಿಳಿಸಿದರು.

ಬಿಗಿ ಪೋಲಿಸ್ ಭದ್ರತೆ
ತಾಲೂಕಿನಾದ್ಯಂತ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಿಗಿದ್ದು, ಮೆರವಣಿಗೆ, ಸಂಭ್ರಮಾಚರಣೆ, ಮಾರಕಾಸ್ತ್ರಗಳನ್ನು ಕೈಯ್ಯಲ್ಲಿ ಹಿಡಿದು ಓಡಾಡುವುದು ಹಾಗೂ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮುಂಭಾಗದ ಚನ್ನರಾಯಪಟ್ಟಣ ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಾಳೆ ಬೆಳಿಗ್ಗೆ 6ಗಂಟೆಯಿಂದ ಮಂಗಳವಾರ ಮಧ್ಯರಾತ್ರಿ 12ಗಂಟೆಯವರೆಗೂ ನಿಷೇಧಾಜ್ಞೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ.ಆದ್ದರಿಂದ ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಹಾಗೂ ಅಭಿಮಾನಿಗಳು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೋಲಿಸರಿಗೆ ಸಂಪೂರ್ಣ ಸಹಕಾರ ನೀಡಬೇಕೆಂದು ಡಿವೈಎಸ್ ಪಿ ವಿಶ್ವನಾಥ್ ಮನವಿ ಮಾಡಿದ್ದಾರೆ.



