ಬೆಂಗಳೂರು: ಬಿಬಿಎಂಪಿ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಸರ್ಕಾರದ ತಾತ್ವಿಕ ಒಪ್ಪಿಗೆ ಇದೆ. ಕಾನೂನು ಬದ್ಧವಾಗಿ ಜಾರಿಗೊಳಿಸಲು ಸರ್ಕಾರದ ಹಿರಿಯ ಅಧಿಕಾರಿಗಳು, ಕಾನೂನು ಇಲಾಖೆ ಹಾಗೂ ಪೌರ ಕಾರ್ಮಿಕರ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಸಮಿತಿಯು ಮೂರು ತಿಂಗಳೊಳಗೆ ವರದಿ ಸಲ್ಲಿಸಬೇಕು. ಸರ್ಕಾರವು ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ದೃಷ್ಠಿಯಿಂದ ಆಯವ್ಯಯದಲ್ಲಿ ಮಾಸಿಕ 2000 ರೂ. ಸಂಕಷ್ಟ ಭತ್ಯೆ ಘೋಷಿಸಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ತಿಳಿಸಿದರು.
ಪೌರಕಾರ್ಮಿಕರ ನೇಮಕಾತಿ ಸರಳೀಕರಣಗೊಳಿಸಲು ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಿ, ನೇಮಕಾತಿ ನೀತಿ ಜಾರಿಗೆ ತರಲಾಗುವುದು. ಈ ಸಂದರ್ಭದಲ್ಲಿ ಐ.ಪಿ.ಡಿ. ಸಾಲಪ್ಪ ವರದಿ, ಚಂದ್ರಶೇಖರ್ ಸಮಿತಿ ವರದಿ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ವರದಿಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಸೌಲಭ್ಯ ಒದಗಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‍ನಲ್ಲಿ ಒಂದು ಅಥವಾ ಎರಡು ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಎಂ.ಟಿ.ಬಿ.ನಾಗರಾಜ್, ಬಿ.ಎ. ಬಸವರಾಜ, ಮುನಿರತ್ನ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್. ಹನುಮಂತಪ್ಪ, ಅಖಿಲ ಕರ್ನಾಟಕ ಪೌರಕಾರ್ಮಿಕರ ಮಹಾಸಭೆಯ ಅಧ್ಯಕ್ಷ ನಾರಾಯಣ ಮತ್ತು ಇತರ ಸಂಘಟನೆಗಳ ಪ್ರತಿನಿಧಿಗಳು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಭಾಗವಹಿಸಿದ್ದರು.



