ದಾವಣಗೆರೆ: ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ ಕಾರಣ ದಾವಣಗೆರೆ-ಕೊಂಡಜ್ಜಿ ರಸ್ತೆಯಲ್ಲಿ ಎರಡ್ಮೂರು ತಾಸು ಶವವಿಟ್ಟು ಪ್ರತಿಭಟನೆ ಮಾಡಿದ ಘಟನೆ ಯರಗುಂಟೆ ಗ್ರಾಮದಲ್ಲಿ ನಡೆದಿದೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಯರಗುಂಟೆಯಲ್ಲಿ ಹಿಂದಿನಿಂದಲೂ ಸ್ಮಶಾನಲ್ಲಿ ರಸ್ತೆ ಇತ್ತು. ಈಗ ರಸ್ತೆ ಒತ್ತುವರಿಯಾಗಿದ್ದು, ಗ್ರಾಮದ ನಾರಪ್ಪ ಎಂಬುವವರು ಕೋರ್ಟ್ ನಿಂದ ಆದೇಶ ಪಡೆದು ದಾರಿ ನಮಗೆ ಸೇರಿದ್ದು ಎಂದು ರಸ್ತೆಗೆ ದೊಡ್ಡ ಗಾತ್ರದ ಕಲ್ಲು ಹಾಕಿ ಬಂದ್ ಮಾಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ದಾರಿ ಇಲ್ಲದ ಹಿನ್ನೆಲೆ ಅಜ್ಜಿಯೊಬ್ಬರ ಶವವನ್ನು ಎರಡ್ಮೂರು ತಾಸು ರಸ್ತೆಯಲ್ಲಿ ಇಡಲಾಗಿತ್ತು. ಇಡೀ ಗ್ರಾಮದಲ್ಲಿ ಒಂದು ರೀತಿ ಬಿಗುವಿನ ವಾತಾವರಣ ಉಂಟಾಗಿತ್ತು. ಈ ಸುದ್ದಿ ತಿಳಿದ ದಾವಣಗೆರೆ ತಹಶೀಲ್ದಾರ್ ಬಸನಗೌಡ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪ್ರತಿಭಟನೆ ತಿಳಿಗಿಳಿಸುವ ಪ್ರಯತ್ನ ಮಾಡಿದರು. ಎಷ್ಟೇ ಮನವಿ ಮಾಡಿದರೂ ಪ್ರತಿಭಟನೆ ನಿಲ್ಲಲಿಲ್ಲ.
ತುಂಬಾ ವರ್ಷಗಳಿಂದಲೂ ಅದೇ ಮಾರ್ಗದಲ್ಲಿ ಶವ ತೆಗೆದುಕೊಂಡು ಹೋಗಲಾಗುತ್ತಿತ್ತು. ದಾರಿ ನಡುವೆ ದೇವರ ಕಟ್ಟೆ ಇದೆ. ಆ ಕಟ್ಟೆಯ ಬಳಿಯ ಶವದ ಮುಂದೆ ಹಿಡಿದುಕೊಂಡು ಹೋಗುವ ಮಡಿಕೆ ಒಡೆಯುವುದು ಸಂಪ್ರದಾಯ. ಆದ್ರೆ, ಇದೀಗ ದಾರಿಯೇ ಬಂದ್ ಆಗಿದೆ. ನಾರಪ್ಪ ಎಂಬುವವರು ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ ಅಕ್ರಮಿಸಿದ್ದಾರೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ದಾವಣಗೆರೆ ತಹಶೀಲ್ದಾರ್ ಬಸವನಗೌಡ ಕೊಟ್ಟೂರು ಪರಿಶೀಲನೆ ನಡೆಸಿ ಸ್ಮಶಾನಕ್ಕೆ ದಾರಿ ಮಾಡುವುದಾಗಿ ಹೇಳಿದರು. ಕೊನೆಗೆ ಪ್ರತಿಭಟನಕಾರರು ಅದೇ ರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಸೂಕ್ತ ದಾಖಲೆ ಪರಿಶೀಲನೆ ನಡೆಸಿ ಸ್ಮಶಾನಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಮಾಡಬೇಕಿದೆ.