ಬೆಂಗಳೂರು: ಭಾರತೀಯ ಕೃಷಿಯ ಜೀವನಾಡಿ ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ಮಾರುತಗಳು ಭಾನುವಾರ ಕೇರಳಕ್ಕೆ ಪ್ರವೇಶಿಸಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಿಮಾಲಯ, ಬಿಹಾರ, ಮತ್ತು ಪಶ್ಚಿಮ ಬಂಗಾಳದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗಲಿದೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯನ್ನು ತರಿಸಲಿದ್ದು, ಬಂಗಾಳ ಕೊಲ್ಲಿ ಕರಾವಳಿಯಲ್ಲೂ ಮುಂದಿನ ಎರಡು ದಿನಗಳಲ್ಲಿ ಮಳೆ ಬೀಳಲಿದೆ. ಸಾಮಾನ್ಯವಾಗಿ ಜೂನ್ 1 ರಂದು ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುವುದು ವಾಡಿಕೆ. ಈ ವರ್ಷ ಮೂರು ದಿನ ಮೊದಲೇ ಮಾನ್ಸೂನ್ ಪ್ರವೇಶ ಪಡೆದಿದೆ.
ಅರಬ್ಬಿ ಸಮುದ್ರದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಕರ್ನಾಟಕ ಕರಾವಳಿಯಲ್ಲೂ ಎಚ್ಚರಿಕೆ ನೀಡಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪದಲ್ಲೂ ಮಳೆ ಪ್ರಮಾಣ ಹೆಚ್ಚಿರಲಿದೆ ಎಂದು ಎಚ್ಚರಿಕೆ ನೀಡಿದೆ. ಮಾನ್ಸೂನ್ ಮಾರುತಗಳು 40-50 ಕಿಮೀ ವೇಗದಲ್ಲಿದ್ದು, ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ.



